ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಏಕಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ವಿದ್ಯಾರ್ಥಿಗಳ ಜಾಥಾವನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಏಕಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ವಿದ್ಯಾರ್ಥಿಗಳ ಜಾಥಾವನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಉದ್ಘಾಟಿಸುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಡಾ. ಬಲ್ಲಾಳ್, ನಿಜವಾದ ಪ್ರಗತಿಯು ಹೊಸತನದಲ್ಲಷ್ಟೇ ಇಲ್ಲ, ಬದಲಾಗಿ ಯಾವುದು ನಮ್ಮನ್ನು ಪೋಷಿಸುತ್ತದೆ ಅದನ್ನು ಕಾಪಾಡಿಕೊಳ್ಳುವ ಚತುರತೆಯಲ್ಲಿದೆ. ಆದ್ದರಿಂದ ಪರಿಸರ ಜವಾಬ್ದಾರಿಯು ಮಾಹೆಯ ಅವಿಭಾಜ್ಯ ಅಂಗವಾಗಿದೆ. ನಮ್ಮ ಭೂಮಿಯ ಆರೋಗ್ಯವು ನಮ್ಮ ಭವಿಷ್ಯದ ಪೀಳಿಗೆಯ ಯೋಗಕ್ಷೇಮದೊಂದಿಗೆ ಪರಸ್ಪರ ನಂಟಿದೆ. ನಾವು ಅದರ ಭಾಗವಾಗಿರುವಂತೆಯೇ ಪರಿಸರವು ನಮ್ಮ ಅವಿಭಾಜ್ಯ ಅಂಗವಾಗಿದೆ ಎಂದರು.ಮಾಹೆಯ ತಂತ್ರಜ್ಞಾನ ವಿಜ್ಞಾನಗಳ ಸಹಉಪಕುಲಪತಿ ಡಾ. ನಾರಾಯಣ ಸಭಾಹಿತ್, ಶೈಕ್ಷಣಿಕ, ಕಾರ್ಯಾಚರಣೆಗಳು ಮತ್ತು ಪ್ರಭಾವ ಬೀರುವ ಹೆಜ್ಜೆಗಳಲ್ಲಿ ಸುಸ್ಥಿರತೆಯ ಅಭ್ಯಾಸಗಳನ್ನು ಒಳಗೊಳ್ಳುವ ಮಾಹೆಯ ದೃಷ್ಟಿಕೋನವನ್ನು ಪ್ರಸ್ತುತ ಪಡಿಸಿದರು.ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ., ನೀರು, ಗಾಳಿ ಮತ್ತು ಭೂಮಿಯನ್ನು ಮಾಲಿನ್ಯದಿಂದ ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು.ಉಡುಪಿಯ ಟಿ.ಎ. ಪೈ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಕೆ.ಎಸ್. ಅವನೀಶ್ ಮತ್ತು ಮಣಿಪಾಲದ ಮಾಧವ ಕೃಪಾ ಶಾಲೆಯ ಸಮೀಕ್ಷಾ ನಾಯಕ್, ಒಂದು ಬಾರಿ ಬಳಸಿ ಬಿಸಾಕುವ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಆಗುತ್ತಿರುವ ಪರಿಣಾಮಗಳ ಕುರಿತು ಸ್ಪೂರ್ತಿದಾಯಕ ಭಾಷಣ ಮಾಡಿದರು.ಮಾಹೆ ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ರವಿರಾಜ ಎನ್.ಎಸ್., ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸುವ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಇದೇ ಸಂದರ್ಭದಲ್ಲಿ ಮಾಹೆ ಕ್ಯಾಂಪಸ್‌ನಲ್ಲಿ ಸಂಗ್ರಹಿಸಿದ ಮರುಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಂದ ರೂಪಿಸಲಾದ ನಾಲ್ಕು ಬೆಂಚುಗಳು ಗಮನ ಸೆಳೆದವು. ಮಾಹೆ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ಡಾ. ಆನಂದ್ ವೇಣುಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಭಟ್ ಸ್ವಾಗತಿಸಿದರು. ಮಾಹೆ ಎಸ್ಟೇಟ್ ಅಧಿಕಾರಿ ಬಾಲಕೃಷ್ಣ ಪ್ರಭು ಧನ್ಯವಾದ ಅರ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.