ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (ಎಂಸಿಎಚ್‌ಪಿ) ಇದರ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗವು ವೈದ್ಯಕೀಯ ಪ್ರಯೋಗಾಲಯ ಶಿಕ್ಷಣ ಮತ್ತು ಸಂಶೋಧನ ಸಮ್ಮೇಳನ (ಎನ್‌ಎಸಿಸಿಎಲ್‌ಇಆರ್ - 2025) ಆಯೋಜಿಸಿತ್ತು.‘ಉದ್ಯಮ - ಶಿಕ್ಷಣ - ಸಂಶೋಧನಾ ಸಮನ್ವಯತೆ ಮೂಲಕ ಹೊಸತನಕ್ಕೆ ಮುನ್ನುಡಿʼ ಶೀರ್ಷಿಕೆಯಲ್ಲಿ ಸಮ್ಮೇಳನ ಸಂಪನ್ನಗೊಂಡಿತು.ಉದ್ಘಾಟಿಸಿದ ಮಾಹೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರವಿರಾಜ ಎನ್.ಎಸ್., ಕೌಶಲ್ಯ ಆಧಾರಿತ ತರಬೇತಿ ಎನ್ನುವುದು ಆರೋಗ್ಯ ಸಂಬಂಧಿತ ನುರಿತ ವೃತ್ತಿಪರರನ್ನು ಸೃಷ್ಟಿಸುವುದಾಗಿದೆ ಇಂದು ಶರವೇಗದಲ್ಲಿ ವಿಕಾಸಗೊಳ್ಳುತ್ತಿರುವ ಆರೋಗ್ಯ ಕ್ಷೇತ್ರದ ಶೈಕ್ಷಣಿಕ ಜ್ಞಾನ ಮತ್ತು ಉದ್ಯಮಗಳ ನಡುವಿನ ಅಂತರ ಕಡಿಮೆ ಮಾಡಲು ತಾಂತ್ರಿಕ ಪರಿಣತಿ ಮತ್ತು ಪ್ರಾಯೋಗಿಕ ಅನ್ವಯಗಳ ಸಹಯೋಗ ಅತ್ಯಗತ್ಯ. ಈ ಸಮನ್ವಯದಿಂದಾಗಿಯೇ ಮಾಹೆಯಲ್ಲಿ ಓದಿದ ವಿದ್ಯಾರ್ಥಿಗಳು ಕೇವಲ ಪದವೀಧರರಾಗಿರದೆ, ಮೊದಲ ದಿನದಿಂದಲೇ ಆರೋಗ್ಯ ಕ್ಷೇತ್ರದ ಉನ್ನತಿಗಾಗಿ ಕೊಡುಗೆ ನೀಡಲು ಸಿದ್ದವಾಗಿರುವ ನುರಿತು ವೃತ್ತಿಪರರಾಗಿರುತ್ತಾರೆ ಎಂದರು.
ಎಂಸಿಎಚ್‌ಪಿ ಡೀನ್ ಡಾ. ಜಿ. ಅರುಣ್ ಮೈಯಾ, ಆರೋಗ್ಯ ಕ್ಷೇತ್ರದ ನೈಜ ಸವಾಲುಗಳನ್ನು ಎದುರಿಸುವುದಕಕೆ ಮತ್ತು ಪರಿಹಾರ ನೀಡುವುದಕ್ಕೆ ಉದ್ಯಮ - ಶೈಕ್ಷಣಿಕ ಪಾಲುದಾರಿಕೆ ಅತ್ಯಗತ್ಯ. ಶೈಕ್ಷಣಿಕ ಜ್ಞಾನವು ಪ್ರಾಯೋಗಿಕ ಆವಿಷ್ಕಾರಗಳಾಗಿ ಪರಿವರ್ತನೆಗೊಳ್ಳುವಲ್ಲಿ, ಸಂಶೋಧನೆಗಳು ಜನರಿಗೆ ಉಪಯೋಗವಾಗುವಲ್ಲಿ ಈ ರೀತಿಯ ಸಹಯೋಗಗಳು ಅಗತ್ಯ ಪರಿಸರ ಸೃಷ್ಟಿಸುತ್ತವೆ ಎಂದು ಹೇಳಿದರು.ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸರಿತಾ ಕಾಮತ್ ಯು. ಸ್ವಾಗತ ಕೋರಿದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಕಲೈವಾಣಿ ಎಂ. ಸಮ್ಮೇಳನದ ಅವಲೋಕನ ನೀಡಿದರು, ಸಹ-ಸಂಘಟನಾ ಕಾರ್ಯದರ್ಶಿ ಡಾ. ಅಂಜು ಎಂ. ಧನ್ಯವಾದ ಹೇಳಿದರು.
ಈ ಸಮ್ಮೇಳನದಲ್ಲಿ ದೇಶದಾದ್ಯಂತ 27 ಸಂಸ್ಥೆಗಳ 240ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು ಮತ್ತು 7 ಮಂದಿ ತಜ್ಞರು ʼಲ್ಯಾಬೋರೇಟರಿ ಮೆಡಿಸಿನ್ʼ ಕುರಿತು ವಿಷಯ ಹಂಚಿಕೊಂಡರು.