ಮಾಗಡಿ: ತಾಲೂಕಿನ ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಟ್ಟಗುಡ್ಡ ದಟ್ಟ ಅರಣ್ಯದೊಳಗೆ ಸುಂದರ ಪ್ರಾಕೃತಿಕ ಮಡಿಲಿನಲ್ಲಿರುವ ಸಾವನದುರ್ಗದಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.5 ದಿನಗಳ ಕಾಲ ನಡೆಯುವ ಪೂಜಾ ಕೈಂಕರ್ಯಗಳಲ್ಲಿ 3ನೇ ದಿನವಾದ ಸೋಮವಾರ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಹೂವಿನ ಪಲ್ಲಕ್ಕಿ ತೆಪ್ಪೋತ್ಸವ ಕಾರ್ಯಕ್ರಮಗಳು ಕೂಡ ನಡೆಯಲಿದ್ದು, ರಥದಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ಮೂರ್ತಿಯನ್ನಿಟ್ಟು ರಥೋತ್ಸವಕ್ಕೆ ವಿಧಿವಿಧಾನಗಳ ಮೂಲಕ ತಹಸೀಲ್ದಾರ್ ಶರತ್ ಕುಮಾರ್ ಚಾಲನೆ ನೀಡಿದರು.
ಹಣ್ಣು ದವನವನ್ನ ನರಸಿಂಹಸ್ವಾಮಿ ಮೂರ್ತಿ ಹೊತ್ತಿದ್ದ ರಥಕ್ಕೆ ಸಮರ್ಪಿಸಿ ಇಷ್ಟಾರ್ಥ ಸಿದ್ದಿಗಾಗಿ ಬೇಡಿಕೊಂಡರು. ಇದೇ ಸಂದರ್ಭದಲ್ಲಿ ವಿವಿಧ ಸಮುದಾಯಗಳ ಅರವಟ್ಟಿಗೆಗಳಲ್ಲಿ ಮಜ್ಜಿಗೆ ಪಾನಕ ಕೋಸಂಬರಿಯನ್ನ ಬಿಸಿಲಿನಲ್ಲಿ ಬಂದವರಿಗೆ ನೀಡಿ ಬಾಯಾರಿಕೆ ತಣಿಸಲಾಯಿತು. ಅನ್ನಸಂತರ್ಪಣೆ ಕೂಡ ಏರ್ಪಡಿಸಲಾಗಿತ್ತು. ಪಟ್ಟದ ಕುಣಿತ ಎಲ್ಲರನ್ನು ರಂಜಿಸಿತ್ತು. ಉದ್ಭವ ಲಕ್ಷ್ಮೀನರಸಿಂಹ ಸ್ವಾಮಿಗೆ ಸಾಕಷ್ಟು ಭಕ್ತರದ್ದು ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಸಾಕಷ್ಟು ಮಂದಿ ಸರದಿಯಲ್ಲಿ ನಿಂತು ಲಕ್ಷ್ಮೀನರಸಿಂಹ ಸ್ವಾಮಿಯ ಆಶೀರ್ವಾದ ಪಡೆದರು. ಬೆಳಗ್ಗೆಯಿಂದಲೇ ವಿಶೇಷ ಗಂಧದ ಅಭಿಷೇಕ ಪಂಚಾಮೃತ ಅಭಿಷೇಕ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ರಾಮನದುರ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಿರು ಬಿಸಿಲಿನ ನಡುವೆಯೂ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ನಾಯಕನ ಪಾಳ್ಯ, ವೀರೇಗೌಡನ ದೊಡ್ಡಿ, ಕಲರಮಂಗಲ, ಗುಡ್ಡಹಳ್ಳಿ, ಮತ್ತ, ಅತ್ತಿಂಗೆರೆ, ಮಾಗಡಿ ಸೇರಿದಂತೆ ಅನೇಕ ಹಳ್ಳಿಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಆಡಳಿತ ಮಂಡಳಿ ಬ್ರಹ್ಮರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇನ್ನು ಎರಡು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.