ಚಾಮರಾಜನಗರ: ಸೆ.29ರಂದು ಮೈಸೂರಿನಲ್ಲಿ ರಾಜ್ಯದ ಮೂಲ ನಿವಾಸಿಗಳಿಂದ ಮಹಿಷ ಸಾಂಸ್ಕೃತಿಕ ಹಬ್ಬ ಮಹಿಷ ದಸರಾ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಿಂದ 5 ಸಾವಿರ ಜನರು ಮಹಿಷ ದಸರಾಕ್ಕೆ ಭಾಗವಹಿಸಲಿದ್ದೇವೆ ಎಂದು ದಲಿತ ಸಂಘಟನೆ ಮುಖಂಡ ಕೆ.ಎಂ. ನಾಗರಾಜು ತಿಳಿಸಿದರು.
3ನೇ ಶತಮಾನದಲ್ಲಿ ಮಹಿಷಾಸುರ ಎಂಬ ರಾಜನಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದ್ದು, ಮಹಿಷಾಸುರ ಎಂಬ ರಾಜನ ಹೆಸರಿನಿಂದಲೇ ಮೈಸೂರು ಇದೆ. ಅಲ್ಲಿದ್ದ ಮೂಲನಿವಾಸಿಗಳು ಮಹಿಷಾಸುರನ ಜಯಂತಿ ಹಾಗೂ ಮಹಿಷ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು. ದಲಿತ ಮುಖಂಡ ಶಿವಣ್ಣ ಮಾತನಾಡಿ, ನಾವು ಚಾಮುಂಡಿ ದೇವಿಯ ವಿರೋಧಿಗಳಲ್ಲ. ಮಹಿಷ ಮೂಲ ನಿವಾಸಿಗಳ ದೊರೆಯಾಗಿರುವುದರಿಂದ ಮಹಿಷ ದಸರಾ ಆಚರಿಸುತ್ತಿದ್ದೇವೆ. ಮಾಜಿ ಸಂಸದ ಪ್ರತಾಪ್‌ಸಿಂಹ ಮೂಲನಿವಾಸಿಗಳ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ದಲಿತ ಮುಖಂಡ ಸಂಘಸೇನಾ ಮಾತನಾಡಿ, ಪ್ರತಾಪ್ ಸಿಂಹ ಅವರನ್ನು ಬಂಧಿಸಬೇಕು, ಮಹಿಷ ದಸರಾ ಯಶಸ್ವಿಗೆ ಸಹಕರಿಸಬೇಕು ಇಲ್ಲದಿದ್ದರೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಯರಿಯೂರು ರಾಜಣ್ಣ, ಸುಭಾಷ್ ಮಾಡ್ರಹಳ್ಳಿ, ಬಂಗಾರಸ್ವಾಮಿ, ಪರಶಿವಮೂರ್ತಿ ಇದ್ದರು.