ಹಗರಿಬೊಮ್ಮನಹಳ್ಳಿ: ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಜ್ಜಿತ ಕಚೇರಿ, ಮೊಬೈಲ್, ಪ್ರಿಂಟರ್, ಸ್ಕ್ಯಾನರ್, ಲ್ಯಾಪ್‌ಟಾಪ್ ವಿತರಿಸಬೇಕು ಎಂದು ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿ ಅನಿರ್ದಿಷ್ಟ ಮುಷ್ಕರ ನಡೆಸಿದರು.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಯಂಕಾರೆಡ್ಡಿ ಮಾತನಾಡಿ, ಸರಕಾರ ಕೂಡಲೇ ಕುಟುಂಬದಿಂದ ದೂರವಿರುವ ಗ್ರಾಮ ಆಡಳಿತ ಅಧಿಕಾರಿಗಳ ಅಂತರ್ ಜಿಲ್ಲಾ ಪತಿಪತ್ನಿ ವರ್ಗಾವಣೆಗೆ ಅನುಕೂಲ ಮಾಡಿಕೊಡಬೇಕು. ಗ್ರಾಮ ಆಡಳಿತಾಧಿಕಾರಿಗಳು ಅತ್ಯಂತ ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಮೊಬೈಲ್ ತಂತ್ರಾಂಶದ ವಿಚಾರವಾಗಿಯೆ ಹಲವರು ಅಮಾನತುಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಒತ್ತಡ ತಡೆ ಮತ್ತು ಗುಣಮಟ್ಟದ ಸೇವೆಗೆ ಪೂರಕ ಸೌಲಭ್ಯ ಒದಗಿಸಬೇಕು. ಅಂಗವಿಕಲ, ಅನಾರೋಗ್ಯ ಸೇರಿ ತೀವ್ರ ಅನಿವಾರ್ಯ ಪ್ರಕರಣಗಳಿಗೆ ನಿಯೋಜನೆ ಅವಕಾಶ ಕಲ್ಪಿಸಿ, ಕೌನ್ಸಿಲಿಂಗ್‌ನಲ್ಲಿ ನಿಯೋಜನೆ ಆದೇಶ ನೀಡಬೇಕು. ಮಳೆಹಾನಿ ಪ್ರಕರಣಗಳ ಜವಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈಬಿಡಬೇಕು. ಕೆಲಸದ ಒತ್ತಡದಿಂದ ಅನೇಕ ನೌಕರರು ದುಶ್ಚಟಕ್ಕೆ ಒಳಗಾಗುತ್ತಿರುವುದನ್ನು ಸರಕಾರ ಗಮನಹರಿಸಿ, ಆಡಳಿತದಲ್ಲಿ ವ್ಯಾಪಕ ಬದಲಾವಣೆ ತರಬೇಕು ಎಂದರು.ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ದೊಡ್ಡಬಸಪ್ಪ ರೆಡ್ಡಿ ಮಾತನಾಡಿ, ಸ್ಥಳೀಯ ಶಾಸಕರ ಅನುದಾನದಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್ ಒದಗಿಸುವಂತೆ ಸೂಚಿಸಲಾಗುವುದು. ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಈಡೇರಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ಶೀಘ್ರದಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಪಂಪಾಪತಿ, ಸಂಘದ ಗುರುಬಸವರಾಜ, ಪ್ರಭಾಕರ, ನವೀನ್, ಕರೀಶ, ಮಂಜಮ್ಮ, ಗಾಯತ್ರಿ, ಶ್ವೇತಾ, ಹೊನ್ನೂರ್ ಸಾ, ಚನ್ನಬಸಪ್ಪ ಗಡಾದ್, ರಾಜಶೇಖರ ಹುಲ್ಮನಿ, ಸವಿತಾ, ವಾಣಿ, ಆಸಿಫ್‌ಅಲಿ, ಗ್ರಾಮ ಸಹಾಯಕರ ಸಂಘದ ಕರಿಬಸಪ್ಪ, ಫಕ್ಕೀರಪ್ಪ, ನಾಗರಾಜ ಇದ್ದರು.ಹಗರಿಬೊಮ್ಮನಹಳ್ಳಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.