-ಸುದ್ದಿಗೋಷ್ಠಿಯಲ್ಲಿ ಮಹಿಷ ದಸರಾ ಆಚರಣೆ ಸಮಿತಿ ಮುಖಂಡ ಆರೋಪ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮಹಿಷ ದಸರಾ ಆಚರಣೆಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಆರೋಪಿಸಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಷ ದಸರಾ ಆಚರಣೆ ಸಮಿತಿ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಕಾಣದ ಕೈಗಳು ಪಿತೂರಿ ನಡೆಸಿ ಮಹಿಷ ದಸರಾ ಆಚರಣೆ ತಡೆಯುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುವ ಷಡ್ಯಂತ್ರ ನಡೆಸಿವೆ ಎಂದು ಆರೋಪಿಸಿದರು. ಮೂಲ ನಿವಾಸಿಗಳ ದೊರೆಯಾದ ಮಹಿಷನ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಮಹಿಷಾ ದಸರಾವನ್ನು ಏರ್ಪಡಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಪ್ರೊ. ಭಗವಾನ್‌ರನ್ನು ಬರದಂತೆ ತಡೆಯುವ ಸಲುವಾಗಿ ಇಡೀ ಕಾರ್ಯಕ್ರಮ ನಡೆಸದಂತೆ ಮಾಡಿರುವುದು ಜಿಲ್ಲಾಡಳಿತ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಸಂಕೇತವಾಗಿದೆ ಎಂದು ಹೇಳಿದರು. ಮಹಿಷ ದಸರಾ ಆಚರಣೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ತೊಂದರೆ ಆಗುತ್ತದೆ ಎಂಬ ಕಾರಣ ನೀಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಹಿಂದೆ ನಡೆದಿರುವ ಅನೇಕ ಕಾರ್ಯಕ್ರಮಗಳಿಂದ ಪ್ರವಾಸಿಗರಿಗೆ ತೊಂದರೆ ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಮುಖವಾಣಿಯಂತೆ ತೀರ್ಮಾನ ಕೈಗೊಂಡಿದ್ದಾರೆ, ಕಾರ್ಯಕ್ರಮದ ಸಂಘಟಕರನ್ನು ಕನಿಷ್ಠ ಸೌಜನ್ಯ ಕ್ಕಾದರೂ ಮಾತನಾಡಿಸಿ ನಿರ್ಧಾರ ಕೈಗೊಳ್ಳಬಹುದಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಆರೋಪಿಸಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ದಲಿತ ಸಂಘಟನೆಗಳ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದ ಅವರು, ರಾಜಶೇಖರ್ ಮಾತನಾಡಿರುವ ಧಾಟಿಯಲ್ಲಿ ಉತ್ತರ ನೀಡಲು ನಮಗೂ ಗೊತ್ತಿದೆ. ಅನೇಕ ಪ್ರಗತಿಪರ ಒಕ್ಕಲಿಗ ಮುಖಂಡರು ಮಹಿಷ ದಸರಾಕ್ಕೆ ಬೆಂಬಲಿಸಿ ದ್ದಾರೆ. ಆದರೆ ಕಾಣದ ಕೈಗಳ ಪಿತೂರಿಯಿಂದ ಒಕ್ಕಲಿಗರ ಸಂಘದ ಮೂಲಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದು, ಈ ಷಡ್ಯಂತ್ರವನ್ನು ಮುಂದಿನ ದಿನ ಗಳಲ್ಲಿ ರಾಜಕೀಯವಾಗಿಯೇ ನಿರ್ಧರಿಸುತ್ತೇವೆಂದು ಹೇಳಿದರು. ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅವರಿಗೆ ದಲಿತರ ಬಗ್ಗೆ ಏನು ಗೊತ್ತಿಲ್ಲ, ಅವರಿಂದ ದಲಿತರು ಪಾಠ ಕಲಿಯಬೇಕಾಗಿಲ್ಲ, ಬಿ.ಕೆ. ಸುಂದರೇಶ್‌ರಂತಹ ನಾಯಕರು ಎಚ್.ಎಚ್ ದೇವರಾಜ್ ಅಂತಹ ನಾಯಕರು ಇನ್ನೂ ಅನೇಕರು ದಲಿತರ ಪರವಾಗಿ ಜತ್ಯತೀತವಾಗಿ ನಡೆದುಕೊಂಡು ಬಂದಿರುವ ಇತಿಹಾಸವಿದೆ ಅದರ ಮಧ್ಯೆ ರಾಜಶೇಖರ್ ಯಾವ ಲೆಕ್ಕಕ್ಕೂ ಇಲ್ಲ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ವಕೀಲ ಪರಮೇಶ್, ಮುಖಂಡರಾದ ಹರೀಶ್‌ಮಿತ್ರ, ಚಂದ್ರಶೇಖರ್, ಹಿರೇಮಗಳೂರು ಸುರೇಶ್ ಉಪಸ್ಥಿತರಿದ್ದರು.