ಭಾನುವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ನಡೆದ ಮಹಿಷೋತ್ಸವದಲ್ಲಿ ಮಹಿಷಾ ‘ಸುರ’ ಯಾರು? ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ ಉಡುಪಿ ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಇಲ್ಲದ, ಕಾಲ್ಪನಿಕ ದೇವರನ್ನು ಸೃಷ್ಟಿಸಿ ಮುಗ್ಧ ಜನರನ್ನು ಗುಲಾಮರನ್ನಾಗಿ ಮಾಡಲಾಗಿದೆ. ಇದರ ವಿರುದ್ಧ ಸತ್ಯ ಹೇಳಿದರೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಎಫ್‌ಐಆರ್ ದಾಖಲಿಸಿ ಬೆದರಿಸಲಾಗುತ್ತಿದೆ. ಆದರೆ ಮಹಿಷ ಉತ್ಸವ ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಆಲ್ಲ. ನಮ್ಮ ಅಸ್ತಿತ್ವಕ್ಕಾಗಿ ನಡೆಯುವ ಸಾಂಸ್ಕೃತಿಕ ದಂಗೆಯಾಗಿದೆ ಎಂದು ಕಲಬುರುಗಿಯ ಸಂಶೋಧಕ ಡಾ. ವಿಠ್ಠಲ ವಗ್ಗನ್ ಹೇಳಿದರು. ಅವರು ಭಾನುವಾರ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ನಡೆದ ಮಹಿಷೋತ್ಸವದಲ್ಲಿ ಮಹಿಷಾ ‘ಸುರ’ ಯಾರು? ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಮಹಿ ಅಂದರೆ ಭೂಮಿ. ಷಾ ಅಂದರೆ ಬಲಿಷ್ಠ, ಆದ್ದರಿಂದ ಮಹಿಷಾ ಒಬ್ಬ ಬಲಷ್ಟ ರಾಜನಾಗಿದ್ದ. ಮಹಿಷನಿಗೆ ದೇಶದ ವಿವಿಧೆಡೆ ಮಂದಿರಗಳಿದ್ದ ಬಗ್ಗೆ ಪ್ರಾಚ್ಯ ಸಂಶೋಧನೆಗಳಿಂದ ಪುರಾವೆಗಳು ಸಿಕ್ಕಿವೆ. ಆತ ಕಾಲ್ಪನಿಕ ವ್ಯಕ್ತಿಯಲ್ಲ, ಐತಿಹಾಸಿಕ ರಾಜನಾಗಿದ್ದ ಎಂಬುದನ್ನು ಆತನ ಹೆಸರಿನಲ್ಲಿರುವ ಊರುಗಳೇ ಸಾಕ್ಷಿ ಎಂದವರು ಪ್ರತಿಪಾದಿಸಿದರು. ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಚಿಂತಕ ನಾರಾಯಣ ಮಣೂರು ವಿಚಾರಸಂಕಿರಣದಲ್ಲಿ ವಿಚಾರಗಳನ್ನು ಮಂಡಿಸಿದರು. ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ತಾಲೂಕು ಅಧ್ಯಕ್ಷ ದಯಾನಂದ ಕಪ್ಪೆಟ್ಟು, ಪ್ರಮುಖರಾದ ಶೇಖರ ಹೆಜಮಾಡಿ ಉಪಸ್ಥಿತರಿದ್ದರು. ಗೀತಾ ಸ್ವಾಗತಿಸಿದರು. ದಲಿತ ಚಿಂತಕ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಸೇನೆಯ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ ವಂದಿಸಿದರು. ದಯಾಕರ್ ಮಲ್ಪೆ ನಿರೂಪಿಸಿದರು. ಪೊಲೀಸರ ರಕ್ಷಣೆಯಲ್ಲಿ ನಡೆದ ಮಹಿಷೋತ್ಸವ ಅಂಬೇಡ್ಕರ್ ಯುವಸೇನೆ ಉಡುಪಿ ವತಿಯಿಂದ ಘೋಷಿಸಲಾಗಿದ್ದ ಮಹಿಷಾ ದಸರಾದ ಮೆರವಣಿಗೆಗೆ ಪೊಲೀಸ್ ಇಲಾಖೆ ಪರವಾನಗಿ ನೀಡಿರಲಿಲ್ಲ. ಆದ್ದರಿಂದ ಸಂಘಟಕರು ಮಹಿಷಾ ದಸರಾವನ್ನು ಮಹಿಷೋತ್ಸವವನ್ನಾಗಿ ವಿಚಾರ ಸಂಕಿರಣಕ್ಕೆ ಸೀಮಿತಗೊಳಿಸಿದ್ದರು. ಅಂಬೇಡ್ಕರ್ ಭವನದ ಹೊರಭಾಗದಲ್ಲಿ ಮಹಿಷಾಸುರದ ಸ್ತಬ್ಧಚಿತ್ರ ಸಾಂಕೇತಿಕ ಮೆರವಣಿಗೆ ನಡೆಸಲಾಯಿತು. ಸಭಾಭವನದ ಹೊರಗೆ - ಒಳಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಹೆಚ್ಚುವರಿಯಾಗಿ ಮೀಸಲು ಪಡೆಯ ತುಕಡಿಯನ್ನೇ ನಿಯೋಜಿಸಲಾಗಿತ್ತು. ಕಾಂಗ್ರೆಸ್ ನಾಯಕರಾದ ಅಮೃತ್ ಶೆಣೈ, ಕಿಶನ್ ಹೆಗ್ಡೆ ಕೊಳ್ಕೆಬೈಲು ಮತ್ತಿತರ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.