ಸಪ್ತ ಋಷಿಮುನಿಗಳ ಪುಣ್ಯಕ್ಷೇತ್ರ ಮಹಿಷವಾಡಗಿ!

KannadaprabhaNewsNetwork |  
Published : May 01, 2025, 12:50 AM IST
ಅಥಣಿ | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಹಿನ್ನೆಲೆ ಕೃಷ್ಣಾ ನದಿಯ ದಂಡೆಯ ಮೇಲಿರುವ ಪುಣ್ಯ ಕ್ಷೇತ್ರವಾಗಿದೆ.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಕೃಷ್ಣಾ ನದಿ ತಟದಲ್ಲಿರುವ ಮಹಿಷವಾಡಗಿ ಗ್ರಾಮ ಜೈನ ಸಮುದಾಯದ ಪುಣ್ಯ ಕ್ಷೇತ್ರವಾಗಿದೆ. ಗ್ರಾಮದ ಐತಿಹಾಸಿಕ ಬಸದಿ ಜೀರ್ಣೋದ್ಧಾರಗೊಂಡು 1008 ಶ್ರೀ ಮಲ್ಲಿನಾಥ ತೀರ್ಥಂಕರ ವೇದಿ(ಪೀಠ) ಪ್ರತಿಷ್ಠಾಪನೆ ಆಗಿರುವುದು ಗ್ರಾಮಸ್ಥರಲ್ಲಿ ಮತ್ತಷ್ಟು ಭಕ್ತಿಭಾವ ಹೆಚ್ಚಿಸಿದೆ. ಗ್ರಾಮದ ಸಪ್ತಋಷಿ ಮುನಿಗಳಲ್ಲಿ ಒಬ್ಬರಾದ ಪ.ಪೂ. ಸ್ವಸ್ತಿ ಶ್ರೀ 108 ಸಿದ್ಧನಾಗರ ಗುರುಬಿಂಬ ವೇದಿ ಪ್ರತಿಷ್ಠಾ ಮಹಾಮಹೋತ್ಸವ ಅಂಗವಾಗಿ ಪುಣ್ಯ ಕ್ಷೇತ್ರ ಮಹಿಶವಾಡಗಿಯಲ್ಲಿ ಕಳೆದ ಏಪ್ರಿಲ್ 28ರಿಂದ ಮೇ 4ರವರೆಗೆ ಪಂಚಕಲ್ಯಾಣ ಮಹೋತ್ಸವದ ಸಂಭ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವಶಾಂತಿ, ಆತ್ಮಶಾಂತಿ, ವಿಶ್ವಕಲ್ಯಾಣ. ಅತ್ಮ ಕಲ್ಯಾಣ ಹಾಗೂ ಪುಣ್ಯ ಸಂಪಾದನಾರ್ಥ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮಹತ್ವಪೂರ್ಣ ಮತ್ತು ಐತಿಹಾಸಿಕ ಕಾರ್ಯಕ್ರಮದಲ್ಲಿ ಅಥಣಿ ಸೇರಿದಂತೆ ಸುತ್ತಮುತ್ತಲಿನ ಅನೇಕ ತಾಲೂಕುಗಳ ಲಕ್ಷಾಂತರ ಸಂಖ್ಯೆಯಲ್ಲಿ ಶ್ರಾವಕ, ಶ್ರಾವಕಿಯರು ಪಾಲ್ಗೊಳ್ಳಲಿದ್ದಾರೆ.

ಮಹಿಷವಾಡಗಿ ಹಿನ್ನೆಲೆ:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಹಿನ್ನೆಲೆ ಕೃಷ್ಣಾ ನದಿಯ ದಂಡೆಯ ಮೇಲಿರುವ ಪುಣ್ಯ ಕ್ಷೇತ್ರವಾಗಿದೆ. ಅಥಣಿ ತಾಲೂಕು ಕೇಂದ್ರದಿಂದ ದಕ್ಷಿಣಕ್ಕೆ 26 ಕಿ.ಮೀ. ದೂರದಲ್ಲಿದೆ.

ದುಷ್ಟರು ಗೋವು ಅಪಹರಿಸಿಕೊಂಡು ಹೋಗುತ್ತಿರುವಾಗ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಷನೆಂಬ ಜಟ್ಟಿ ನೋಡಿ ಆ ಗೋವುಗಳ ಬಿಡುಗಡೆಗಾಗಿ ಹೋರಾಡಿ ಪ್ರಾಣಬಿಟ್ಟನು. ಆದ್ದರಿಂದ ಮಹಿಷನಿಂದ ಊರಿಗೆ ಮಹಿಷವಾಡಗಿ ಎಂಬ ಹೆಸರು ಬಂದಿದೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಎದುರಿಗೆ ಇರುವ ವೀರಗಲ್ಲು ಈ ಘಟನೆಗೆ ಸಾಕ್ಷಿಯಾಗಿದೆ.

ಜೈನ ಧರ್ಮದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಗ್ರಾಮವಾಗಿದೆ. ಈ ಗ್ರಾಮದ ಜನಸಂಖ್ಯೆ 7000ಕ್ಕೂ ಅಧಿಕವಾಗಿದ್ದು, ಇಲ್ಲಿ ಎಲ್ಲರೂ ಹೆಚ್ಚಾಗಿ ಕಬ್ಬು ಬೆಳೆಗಾರರಾಗಿದ್ದು, ಹಸು ಮತ್ತು ಎಮ್ಮೆಗಳನ್ನು ಸಾಕಾಣಿಕೆ ಮಾಡಿಕೊಂಡು ಹೈನುಗಾರಿಕೆ ಮಾಡುತ್ತಿರುವುದರಿಂದ ಈ ಗ್ರಾಮ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಪ್ರಸಿದ್ಧಿಯಾಗಿದೆ. ತಾವು ದಿನನಿತ್ಯ ಶ್ರಮವಹಿಸಿ ದುಡಿದು ಸಂಪಾದಿಸಿದ ಹಣವನ್ನು ಪಂಚಕಲ್ಯಾಣ ಮಹಾಮಹೋತ್ಸವದಂತಹ ಸತ್ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ಐತಿಹಾಸಿಕ ಮಹತ್ವ ಹೊಂದಿದ ಗ್ರಾಮವು 7 ಜೈನ ಋಷಿಮುನಿಗಳನ್ನು ರಾಜ್ಯ, ದೇಶಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಮತ್ತಷ್ಟು ಹೆಚ್ಚಿಸಿದೆ.

ಸಪ್ತ ಋಷಿಮುನಿಗಳು:

1)ಶ್ರೀ 108 ಸಿದ್ಧಸಾಗರ ಮುನಿ ಮಹಾರಾಜರು

2)ಶ್ರೀ 108 ನಮಿ ಸಾಗರ ಮಹಾರಾಜರು

3)ಶ್ರೀ 108 ನಂದಿ ಮಿತ್ರ ಮಹಾರಾಜರು

4)ಶ್ರೀ 108 ಧರ್ಮಸೇನ ಮಹಾರಾಜರು

5)ಶ್ರೀ 108 ನರಸೇನಾ ಮಹಾರಾಜರು

6)ಶ್ರೀ 108 ಸುಪಾರ್ಶ್ವಸೇನ ಮಹಾರಾಜರು

7)ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು

108 ಕುಲರತ್ನ ಭೂಷಣ ಮುನಿ ಮಹಾರಾಜರ ಪರಿಚಯ:

ಧರ್ಮವನ್ನು ಯಾರು ಭಕ್ತಿ ಭಾವದಿಂದ ರಕ್ಷಿಸುತ್ತಾರೋ, ಅವರನ್ನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಧರ್ಮ ರಕ್ಷಿಸುತ್ತದೆ ಎಂಬ ಸಂದೇಶದ ಮೂಲಕ ಇಡೀ ಸಮುದಾಯಕ್ಕೆ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ಸನ್ಮಾರ್ಗ ತೋರುತ್ತಿದ್ದಾರೆ. ತಮ್ಮ 8ನೇ ವಯಸ್ಸಿನಲ್ಲಿ ಕುಟುಂಬ ತೊರೆದು ಜೈನ ಧರ್ಮದ ತತ್ವಗಳಿಗೆ ಪ್ರಭಾವಿತರಾಗಿ ಧರ್ಮಕೋಶ ಓದುವ ಮೂಲಕ ಅಪಾರ ಜ್ಞಾನ ಸಂಪಾದಿಸಿದರು. ತಮ್ಮ ಸ್ವ ಇಚ್ಛೆಯಿಂದ 2000ರಲ್ಲಿ ಮಹಾರಾಷ್ಟ್ರ ರಾಜ್ಯದ ಅಷ್ಟಾಗ್ರಾಮದಲ್ಲಿ ಜೈನ ಧರ್ಮ ಸ್ವೀಕಾರ ಮಾಡಿದರು. 2003ರಲ್ಲಿ ಕರ್ನಾಟಕ ರಾಜ್ಯದ ಕೋಥಳಿ ಗ್ರಾಮದಲ್ಲಿ ದಿಗಂಬರ ಜೈನೇಶ್ವರಿ ದೀಕ್ಷಾ ಧರಿಸಿದರು. ಅಂದಿನಿಂದ ಜೈನ ಧರ್ಮದ ವಿಹಾರ ಮತ್ತು ಸತ್ಸಂಗಗಳಲ್ಲಿ ಪಾಲ್ಗೊಂಡು ಲಕ್ಷಾಂತರ ಶ್ರಾವಕ ಶ್ರಾವಕಿಯರಿಗೆ ಸನ್ಮಾರ್ಗ ತೋರಿಸುತ್ತಾ ಧರ್ಮ ಪ್ರಸಾರದಲ್ಲಿ ತೊಡಗಿದ್ದಾರೆ.

10 ಎಕರೆ ವಿಸ್ತೀರ್ಣದಲ್ಲಿ ಭವ್ಯ ಮಂಟಪ

ಮಹಿಷವಾಡಗಿ ಗ್ರಾಮದಲ್ಲಿ ಇಡೀ ಗ್ರಾಮಸ್ಥರಲ್ಲಿ ಒಗ್ಗೂಡಿಕೊಂಡು ಮಾಡುತ್ತಿರುವ ಈ ಐತಿಹಾಸಿಕ ಪಂಚ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಭವ್ಯ ಹಾಗೂ ಆಕರ್ಷಕ ಮಂಟಪ, ಮಹಾ ವೇದಿಕೆ ಸಿದ್ಧಪಡಿಸಲಾಗಿದೆ. ಮಂಟಪದಲ್ಲಿ ಏಕಕಾಲಕ್ಕೆ 50 ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಶ್ರಾವಕ ಸ್ರಾವತಿಯರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಅಲ್ಲಲ್ಲಿ ವೀಕ್ಷಣೆಗೆ ಎಲ್ಇಡಿ ಸ್ಕ್ರೀನ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಪಂಚ ಕಲ್ಯಾಣ ಮಹೋತ್ಸವ ಆಗಮಿಸುವವರಿಗೆ ಶುದ್ಧ ಕುಡಿವ ನೀರು, ಉಚಿತ ಕಬ್ಬಿನ ಹಾಲು, ಪ್ರಸಾದದ ವ್ಯವಸ್ಥೆ, ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಅನೇಕ ಯುವಕರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

ವಿಶೇಷ ಕಾರ್ಯಕ್ರಮಗಳು:

ಮೇ 1ರಂದು ಜನ್ಮ ಕಲ್ಯಾಣ ಕಾರ್ಯಕ್ರಮ

2ರಂದು ರಾಜ್ಯಾಭಿಷೇಕ ಮತ್ತು ದೀಕ್ಷಾ ಕಲ್ಯಾಣ ಕಾರ್ಯಕ್ರಮ

3ರಂದು ಕೇವಲಜ್ಞಾನ ಕಲ್ಯಾಣ ಕಾರ್ಯಕ್ರಮ

4ರಂದು ನಿರ್ವಾಣ ಕಲ್ಯಾಣ ಕಾರ್ಯಕ್ರಮ

ಆಕರ್ಷಣೀಯ ಶಿಖರ್ಜಿ ಮಾದರಿಗಳು:

ಶಿಖರ್ಜಿ (ಶಿಖರ್ಜಿ), ಸಮ್ಮೇತ್ ಅಥವಾ ಸಮ್ಮೇದ್ ಶಿಖರ್ಜಿ ಎಂದೂ ಕರೆಯಲ್ಪಡುತ್ತದೆ. ಇದು ಜಾರ್ಖಂಡ್‌ನ ಗಿರಿಡಿಹ್ ಜಿಲ್ಲೆಯಲ್ಲಿರುವ ಜೈನರಿಗೆ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದರ ಮಾದರಿ ಸಿದ್ಧಪಡಿಸಿರುವುದು ಆಕರ್ಷಣೀಯವಾಗಿದೆ. ಇನ್ನೂ ಬಿಹಾರ ರಾಜ್ಯದ ಪವಾಪುರಿಯಲ್ಲಿರುವ ಜಲ ಮಂದಿರ ಅಥವಾ ಜಲ ದೇವಾಲಯ ಮಾದರಿಯು ಕೂಡ ನಿರ್ಮಿಸಲಾಗಿದೆ.

PREV

Recommended Stories

ನಟಿ ರಮ್ಯಾಗೆ ಕೆಟ್ಟ ಮೆಸೇಜ್‌ ಕಳಿಸಿದ್ದ ಮತ್ತೊಬ್ಬನ ಬಂಧನ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ