ಹಾವೇರಿ: ತ್ಯಾಗ ಮತ್ತು ಬಲಿದಾನದ ಮೂಲಕ ಬದುಕಿನುದ್ದಕ್ಕೂ ದೇಶಪ್ರೇಮ ರೂಢಿಸಿಕೊಂಡು ಹುತಾತ್ಮರಾದ ಮೈಲಾರ ಮಹಾದೇವಪ್ಪ ಅವರು ಯುವ ಸಮೂಹಕ್ಕೆ ಸದಾ ಪ್ರೇರಣಾದಾಯಕ ಶಕ್ತಿ ಎಂದು ಹುತಾತ್ಮ ಮೈಲಾರ ಮಹಾದೇವಪ್ಪ ಅವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ ಅಭಿಪ್ರಾಯಪಟ್ಟರು.
ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಂಚಾಲಕ ಆವರಗೆರೆ ರುದ್ರಮುನಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಜೀವ ಮತ್ತು ಜೀವನವನ್ನು ಮುಡಿಪಿಟ್ಟ ಹುತಾತ್ಮ ಮೈಲಾರ ಮಹಾದೇವಪ್ಪನವರ ತ್ಯಾಗ ಮತ್ತು ಬಲಿದಾನವನ್ನು ನವಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾದೇವಪ್ಪ ಅವರ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸಲು ಮನಸ್ಸು ಮಾಡಬೇಕು. ಜತೆಗೆ ಟ್ರಸ್ಟ್ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು ಎಂದರು.
ಇದೇ ಸಂದರ್ಭದಲ್ಲಿ ವೀರಸೌಧದಲ್ಲಿನ ಮೈಲಾರ ಮಹಾದೇವಪ್ಪ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನಗರದಲ್ಲಿನ ಮೈಲಾರ ಮಹಾದೇವಪ್ಪ ಅವರ ಪುತ್ಥಳಿಗೆ ಹೂಮಾಲೆ ಅರ್ಪಿಸಿ, ಗೌರವ ಸಲ್ಲಿಸಲಾಯಿತು.ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಮೈಲಾರ ಮಹಾದೇವಪ್ಪ ಅವರ ಅಭಿಮಾನಿಗಳಾದ ಹೇಮಣ್ಣ ಗಾಣಿಗೇರ, ಬಸವರಾಜ ಗಾಣಿಗೇರ, ಪರಮೇಶಪ್ಪ ಮೈಲಾರ, ಮಹಾದೇವಪ್ಪ ಮೈಲಾರ, ಸುಭಾಷ್ ಮಡಿವಾಳರ, ಷಣ್ಮುಖಯ್ಯ ಕಿತ್ತೂರುಮಠ, ಮಂಜಯ್ಯ ಅಡವಿಮಠ, ಮಂಜನಗೌಡ ಹೊಸಗೌಡ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಮಾರುತಿ ಹೊಂಬರಡಿ ಉಪಸ್ಥಿತರಿದ್ದರು.