ಕೋಟೆಕಾರು ಬ್ಯಾಂಕ್‌ ದರೋಡೆಯ ಪ್ರಮುಖ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

KannadaprabhaNewsNetwork |  
Published : Feb 02, 2025, 01:00 AM IST
ಎನ್‌ಕೌಂಟರ್‌ | Kannada Prabha

ಸಾರಾಂಶ

ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುರುಗಂಡಿ ದೇವರ್‌ ಹಾಗೂ ಯಶೋವಾ ರಾಜೇಂದ್ರನ್‌ ಇವರನ್ನು ಪೊಲೀಸರು ತಮಿಳುನಾಡಿನ ತಿರುನ್ವೇಲಿಯಲ್ಲಿ ಬಂಧಿಸಿ ಕರೆತಂದಿದ್ದರು. ಈ ಆರೋಪಿಗಳನ್ನು ಫೆ.3ರ ವರೆಗೆ ಕಸ್ಟಡಿ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಳ್ಳಾಲದ ಕೋಟೆಕಾರು ಬ್ಯಾಂಕ್‌ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುರುಗಂಡಿ ದೇವರ್‌ ಗಡಿಭಾಗ ಅಜ್ಜಿನಡ್ಕ ಎಂಬಲ್ಲಿ ಸ್ಥಳ ಮಹಜರು ವೇಳೆ ತಪ್ಪಿಸಲೆತ್ನಿಸಿದಾಗ ಶನಿವಾರ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದೇ ಪ್ರಕರಣದಲ್ಲಿ ಈ ಹಿಂದೆ ಬಂಧಿತ ಆರೋಪಿ ಕಣ್ಣನ್‌ ಮಣಿ ಎಂಬಾತನಿಗೆ ಪರಾರಿಗೆ ಯತ್ನಸಿದ ವೇಳೆ ಪೊಲೀಸರು ಗುಂಡು ಹಾರಿಸಿದ್ದರು.

ಬ್ಯಾಂಕ್‌ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುರುಗಂಡಿ ದೇವರ್‌ ಹಾಗೂ ಯಶೋವಾ ರಾಜೇಂದ್ರನ್‌ ಇವರನ್ನು ಪೊಲೀಸರು ತಮಿಳುನಾಡಿನ ತಿರುನ್ವೇಲಿಯಲ್ಲಿ ಬಂಧಿಸಿ ಕರೆತಂದಿದ್ದರು. ಈ ಆರೋಪಿಗಳನ್ನು ಫೆ.3ರ ವರೆಗೆ ಕಸ್ಟಡಿ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶನಿವಾರ ಮಧ್ಯಾಹ್ನ ಸ್ಥಳ ಮಹಜರಿಗೆ ಆರೋಪಿ ಮುರುಗಂಡಿ ದೇವರ್‌ನ್ನು ಕರೆದೊಯ್ಯುತ್ತಿದ್ದಾಗ ಕರ್ನಾಟಕ-ಕೇರಳ ಗಡಿಭಾಗದ ಅಜ್ಜಿನಡ್ಕ ಎಂಬಲ್ಲಿ ಆತ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆರೋಪಿ ಪರಾರಿಗೆ ಯತ್ನಿಸುವ ವೇಳೆ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ ಎಂಬವರ ಖಾಸಗಿ ಅಂಗಕ್ಕೆ ಹಲ್ಲೆ ನಡೆಸಿದ್ದಾನೆ. ಆಗ ಉಳ್ಳಾಲ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಅವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ ಅಗರ್‌ವಾಲ್‌ ತಿಳಿಸಿದ್ದಾರೆ.

ಪೊಲೀಸ್‌ ಮಾಹಿತಿ ಪ್ರಕಾರ, 2024ರ ನವೆಂಬರ್‌ನಲ್ಲಿ ಇನ್ನೋರ್ವ ಆರೋಪಿ ಶಶಿ ಥೇವರ್‌ ಎಂಬಾತನನ್ನು ಮುರುಗಂಡಿ ದೇವರ್‌ ಇದೇ ಸ್ಥಳದಲ್ಲಿ ಭೇಟಿಯಾಗಿದ್ದ. ಈ ವೇಳೆ ಮುರುಗಂಡಿಗೆ ಆತ ಪಿಸ್ತೂಲ್‌ ಕೊಟ್ಟಿದ್ದ. ಅಲ್ಲದೆ ಬ್ಯಾಂಕಿನ ಸೆಕ್ಯೂರಿಟಿ ನ್ಯೂನತೆ ಬಗ್ಗೆಯೂ ಶಶಿ ಥೇವರ್‌ ಮಾಹಿತಿ ನೀಡಿದ್ದ. ಆರೋಪಿಗಳು ದರೋಡೆ ನಡೆಸಿದ ಬಳಿಕ ಅಜ್ಜಿನಡ್ಕ ಎಂಬಲ್ಲಿ ರಿವಾಲ್ವರ್‌ನ್ನು ಎಸೆದು ಹೋಗಿದ್ದರು. ಹಾಗಾಗಿ ಮುರುಗಂಡಿಯನ್ನು ಪೊಲೀಸರು ಮಹಜರಿಗೆ ಈ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.

ಈ ವೇಳೆ ಪೊಲೀಸ್‌ ಸಿಬ್ಬಂದಿ ಮಂಜುನಾಥ್‌ಗೆ ಹಲ್ಲೆ ನಡೆಸಿ ಆರೋಪಿ ಮುರುಗಂಡಿ ದೇವರ್ ಪರಾರಿಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಆರೋಪಿಗೆ ಎಚ್ಚರಿಕೆ ನೀಡಿ ಗುಂಡು ಹಾರಿಸಿದ್ದಾರೆ. ಅದಕ್ಕೂ ಆರೋಪಿ ಕೇಳದಾಗ ಎರಡನೇ ಬಾರಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಸ್ಥಳದಲ್ಲಿ ರಿವಾಲ್ವರ್‌ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೆಟಲ್‌ ಡಿಟಕ್ಟರ್‌ ತಂಡವನ್ನೂ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ