ಕನ್ನಡಪ್ರಭ ವಾರ್ತೆ ಸವದತ್ತಿ
ಬೆಳ್ಳಂಬೆಳಗ್ಗೆನೆ ಪಟ್ಟಣದಲ್ಲಿ ಹಲವಾರು ಜೆಸಿಬಿಗಳ ಸದ್ದು ಮಾಡುತ್ತ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡಗಳ ಮೇಲೆ ಆಕ್ರಮಣ ನಡೆಸಿದವು. ಪಟ್ಟಣದ ಎಪಿಎಂಸಿಯಿಂದ ಕೊಪ್ಪದ ಹನಮಂತದೇವರ ದೇವಸ್ಥಾನದವರೆಗಿನ ಮುಖ್ಯರಸ್ತೆಗೆ ಹೊಂದಿಕೊಂಡು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿದ ಎಲ್ಲ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಮುಖಾಂತರ ತೆರವುಗೊಳಿಸಲಾಯಿತು. ಕಳೆದವಾರ ಎಲ್ಲ ಅಂಗಡಿಕಾರರಿಗೆ ಇಲಾಖೆಯಿಂದ ಒಂದು ವಾರದ ಗಡವು ನೀಡಲಾಗಿತ್ತು. ಹೆಸ್ಕಾಂನ ಸಿಬ್ಬಂದಿಯಿಂದ ಒಂದು ದಿನ ಮುಂಚಿತವಾಗಿಯೇ ತೆರವುಗೊಳಿಸುವಂತ ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಗಡವು ನೀಡಿದ ಅವಧಿಗೆ ಮುಂಚೆಯೇ ಕೆಲವರು ಬುಧವಾರದಂದೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಕೊಂಡಿದ್ದರು.
ಉಳಿದಂತ ಎಲ್ಲ ಅಂಗಡಿಗಳನ್ನು ಪೊಲೀಸ್ ಭದ್ರತೆಯೊಂದಿಗೆ ಗುರುವಾರ ಬೆಳಗ್ಗೆ 6 ಗಂಟೆಯಿಂದಲೆ ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿತ್ತು.ತಮ್ಮ ವ್ಯಾಪ್ತಿ ಮೀರಿ ನಿರ್ಮಿಸಿಕೊಂಡ ಖಾಸಗಿ ಮಾಲಿಕತ್ವದ ಕಟ್ಟಡಗಳಿಗೂ ಇಂದು ಕಂಟಕ ಎದುರಾಗಿತ್ತು. ಆಯಾ ಖಾಸಗಿ ಕಟ್ಟಡಗಳ ಮಾಲೀಕರು ಅತಿಕ್ರಮಿಸಿಕೊಂಡ ಜಾಗೆಯನ್ನು ಅಧಿಕಾರಿಗಳು ತೆರವುಗೊಳಿಸುವಲ್ಲಿ ಕಾರ್ಯಪ್ರವೃತರಾಗಿದ್ದರು. ಇನ್ನು ಕಾರ್ಯಾಚರಣೆ ಮುಂದುವರೆದಿದ್ದು, ಮುಖ್ಯ ರಸ್ತೆಗೆ ತೊಂದರೆಯಾಗುವ ನಿಟ್ಟಿನಲ್ಲಿ ನಿರ್ಮಿಸಿಕೊಂಡ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ತೆರವು ಕಾರ್ಯಾಚರಣೆಯಲ್ಲಿ ಹೆಸ್ಕಾಂ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗೋಸ್ಕರ 100 ಜನ ಪೊಲೀಸ್ ಸಿಬ್ಬಂದಿಯವರು ತೆರವುಗೊಳಿಸುವ ಸ್ಥಳದಲ್ಲಿ ಕಾರ್ಯನಿರತರಾಗಿದ್ದರು.ಇಕ್ಕಟ್ಟಾಗಿದ್ದ ರಸ್ತೆಯು ಇಂದು ಸಂಪೂರ್ಣ ಅಗಲವಾಗಿ ಕಾಣುತ್ತಿದ್ದು, ಬರುವಂತ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿ ಯಾವ ರೀತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮಲ್ಲಿಕಾರ್ಜುನ ಹೆಗ್ಗಣ್ಣವರ, ತಹಸೀಲ್ದಾರ್ ಸವದತ್ತಿ
ಸಂಗನಬಸಯ್ಯ ಗದಗಿನಮಠ, ಮುಖ್ಯಾಧಿಕಾರಿ ಸವದತ್ತಿ ಯಲ್ಲಮ್ಮಾ ಪುರಸಭೆ