ದಾವಣಗೆರೆ : ಕೋಳಿ-ಮಾಂಸ ಮಾರಾಟ ಅಂಗಡಿಗಳ ಸುತ್ತ ಸ್ವಚ್ಚತೆ ಕಾಪಾಡಿ

KannadaprabhaNewsNetwork |  
Published : Apr 03, 2024, 01:38 AM ISTUpdated : Apr 03, 2024, 10:37 AM IST
ಪಟ್ಟಣದ ಸಂತೆ ಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಪುರಸಭೆಯ ಮುಖ್ಯಾಧಿಕಾರಿ ಎ.ವಾಸೀಂ ಬೇಟಿ ನೀಡಿ ಪರಿಶೀಲನೆ ನಡೆಸುತ್ತೀರುವುದು | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದ ಸಂತೆ ಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಪಕ್ಕದ ಕೋಳಿ ಅಂಗಡಿಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. 

 ಚನ್ನಗಿರಿ :  ಪಟ್ಟಣದ ಸಂತೆ ಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಪಕ್ಕದ ಕೋಳಿ ಅಂಗಡಿಗಳಿಂದ ಪರಿಸರ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ದೂರುಗಳ ಆಧರಿಸಿ, ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸ್ಟೆಲ್‌ ಬಳಿ ಕೋಳಿ ಅಂಗಡಿಗಳು, ಕೋಳಿ ಸಾಗಣೆ ವಾಹನಗಳಿಂದಾಗಿ ದುರ್ವಾಸನೆ ಅಧಿಕವಾಗಿದೆ. ಹಾಸ್ಟೆಲ್‌ಗೆ ಹೋಗುವ ರಸ್ತೆಯಲ್ಲಿ ಕೋಳಿಗಳ ಸಾಗಿಸುವ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಹೋಗಿ-ಬರಲು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮ ಆರೋಗ್ಯ ಕಾಪಾಡುವಂತೆ ಹಾಸ್ಟೆಲ್‌ ವಿದ್ಯಾರ್ಥಿಗಳು ಮಂಗಳವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳ ಮನವಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಾಧಿಕಾರಿ ಎ.ವಾಸಿಂ ಅವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಾಸ್ಟೆಲ್‌ಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಕೋಳಿಮಾಂಸ ವ್ಯಾಪಾರ ಮಾಡುವವರನ್ನು ಕರೆಸಿ ಸ್ವಚ್ಚತೆ ಬಗ್ಗೆ ಮತ್ತು ಕೋಳಿ ತ್ಯಾಜ್ಯವನ್ನು ಪುರಸಭೆಯ ಕಸದ ಗಾಡಿಗಳಿಗೇ ಹಾಕಬೇಕು. ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಡಬೇಕು. ಯಾವುದೇ ಅಂಗಡಿಯವರು ಎಲ್ಲಿಬೇಕೆಂದರಲ್ಲಿ ತ್ಯಾಜ್ಯವನ್ನು ಸುರಿಯದೇ ದಂಡ ಹಾಕುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬಳಿಕ ಸ್ಥಳದಲ್ಲಿದ್ದ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಅವರು, ವಿದ್ಯಾರ್ಥಿಗಳಿಗೆ ಕೋಳಿ, ಮಾಂಸ ಮಾರಾಟದ ಅಂಗಡಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಹಾಸ್ಟೆಲ್‌ಗೆ ಹೋಗುವ ರಸ್ತೆಯಲ್ಲಿ ಕೋಳಿ ಸಾಗಣೆ ವಾಹನಗಳು ಸಂಚರಿಸದಂತೆ ಗ್ರಿಲ್‌ಗಳನ್ನು ನಿರ್ಮಿಸಲಾಗುವುದು ಎಂದರು.

ಕೋಳಿ ಅಂಗಡಿಗಳಲ್ಲಿ ಶೇಖರಣೆ ಆಗುವಂತಹ ತ್ಯಾಜ್ಯಗಳನ್ನು ತೆಗೆದುಕೊಂಡು ಹೋಗಲು ಪುರಸಭೆ ವತಿಯಿಂದ ಪ್ರತಿನಿತ್ಯ ಕಸದ ಗಾಡಿಗಳನ್ನು ಕಳಿಸಲಾಗುತ್ತಿದೆ. ಆದರೂ, ಕೆಲ ಅಂಗಡಿಗಳವರು ತ್ಯಾಜ್ಯವನ್ನು ಕಸದ ಗಾಡಿಗಳಿಗೆ ಹಾಕದೇ ರಸ್ತೆಯಲ್ಲಿಯೇ ಎಸೆಯುತ್ತಿದ್ದಾರೆ. ಇದು ಸರಿಯಲ್ಲ. ಈ ದಿನದಿಂದ ನಮ್ಮ ಕಚೇರಿ ವತಿಯಿಂದ ಒಬ್ಬ ಸಿಬ್ಬಂದಿಯನ್ನು ಇಲ್ಲಿಯೇ ನೇಮಕ ಮಾಡಲಿದ್ದು, ರಸ್ತೆಗೆ ತ್ಯಾಜ್ಯ ಹಾಕುವಂಥವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಅಭಿಯಂತರ ಹಾಲೇಶಪ್ಪ ಸೇರಿದಂತೆ ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಾಜರಿದ್ದರು.

ಕೋಟ್‌ ಸ್ವಚ್ಛತೆ ಮತ್ತು ವಾಹನ ನಿಲುಗಡೆ ನಿಷೇಧಿಸಿರುವ ಕುರಿತು ಈ ದಿನವೇ ಗೋಡೆ ಬರಹಗಳನ್ನು ಬರೆಸಲು ಕ್ರಮ ಕೈಗೊಳ್ಳಲಾಗುವುದು. ಹಾಸ್ಟೆಲ್‌ ವಾತಾವರಣ ಸುಂದರವಾಗಿ ಇಟ್ಟುಕೊಳ್ಳುಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು

- ಎ. ವಾಸಿಂ, ಮುಖ್ಯಾಧಿಕಾರಿ, ಪುರಸಭೆ 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ