ಹಾಸನ: ದುದ್ದ ಗ್ರಾಪಂಗೆ ಭೇಟಿ ನೀಡಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಜಾಗೃತಿ ಮೂಡಿಸಿದರು.
ಆಸ್ಪತ್ರೆ, ಶಾಲೆಗಳು, ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಗಮನವಹಿಸಬೇಕು ಹಾಗೂ ಡೆಂಘೀ ಸೇರಿ ಇನ್ನಿತರ ಕಾಯಿಲೆಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಬದಿಗಳಲ್ಲಿ ಇರುವಂತಹ ಟೀ ಅಂಗಡಿಗಳು, ಬೇಕರಿ, ಉಪಹಾರ ಕೇಂದ್ರಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು ಹಾಗೂ ಕಸ ಸಂಗ್ರಹಣೆ ಮಾಡಲು ಪ್ರತಿ ಅಂಗಡಿಗಳಲ್ಲೂ ಕಸದ ಬುಟ್ಟಿಗಳನ್ನು ಕಡ್ಡಾಯವಾಗಿ ಇಟ್ಟುಕೊಂಡು ಕಸವನ್ನು ಆಟೋಗಳಿಗೆ ಹಾಕುವಂತೆ ಸೂಚನೆ ನೀಡಿದರು. ಎಲ್ಲ ಅಂಗಡಿ ಮಾಲೀಕರ ಸಭೆ ಕರೆದು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ಎಂದರು.ಪ್ರತಿ ಮನೆಯವರು ತಮ್ಮ ಮನೆಗಳ ಸುತ್ತಮುತ್ತ ಹಾಗೂ ಚರಂಡಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದರಲ್ಲದೇ ಟೀ ಅಂಗಡಿಗಳು, ಬೇಕರಿಗಳು, ಉಪಹಾರ ಕೇಂದ್ರಗಳು ಸೇರಿ ಮುಂತಾದ ಅಂಗಡಿಯವರು ಸ್ವಚ್ಛತೆಯನ್ನು ಕಾಪಾಡದಿದ್ದಲ್ಲಿ ದಂಡ ವಿಧಿಸುವಂತೆ ಪಿಡಿಒ ಅವರಿಗೆ ಸೂಚಿಸಿದರು.