ಶ್ರಾವಣಮಾಸ: ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ

KannadaprabhaNewsNetwork |  
Published : Aug 06, 2024, 12:35 AM IST
5ಎಚ್‌ಪಿಟಿ3-ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವರಿಗೆ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿಶೇಷ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ವಿರೂಪಾಕ್ಷೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಹೊಸಪೇಟೆ: ಶ್ರಾವಣ ಮಾಸದ ಪ್ರಯುಕ್ತ ದಕ್ಷಿಣ ಕಾಶಿ ಖ್ಯಾತಿಯ ಹಂಪಿ ಸೇರಿದಂತೆ ವಿಜಯನಗರ ಜಿಲ್ಲೆಯ ಪ್ರಮಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಹವನ ಕಾರ್ಯಕ್ರಮಗಳು ನೆರವೇರಿಸಲಾಗುತ್ತಿದ್ದು, ಎಲ್ಲೆಡೆ ಭಕ್ತರು ದೇವರ ಆರಾಧನೆ ಮಾಡುತ್ತಿದ್ದಾರೆ.

ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ವಿರೂಪಾಕ್ಷೇಶ್ವರ ಸ್ವಾಮೀಜಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮೊದಲ ಶ್ರಾವಣ ಸೋಮವಾರವಾದ್ದರಿಂದ ಭಕ್ತರ ಸಮೂಹ ಹಂಪಿಗೆ ಆಗಮಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಂಪಾಂಬಿಕಾದೇವಿ, ಯಂತ್ರೋದ್ಧಾರಕ ಆಂಜನೇಯ, ಚಕ್ರತೀರ್ಥ ಕೋದಂಡರಾಮ ಸ್ವಾಮಿ, ಉದ್ದಾನ ವೀರಭದ್ರೇಶ್ವರ ದೇವಾಲಯ, ಮಾಲ್ಯವಂತ ರಘುನಾಥ ದೇವಸ್ಥಾನದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಏಳೆಡೆ ನಾಗಪ್ಪ, ಕಮಲಾಪುರ ಗ್ಯಾರೆಬಾವಿ ಆಂಜನೇಯ, ನಗರೇಶ್ವರ, ಜಂಬುನಾಥೇಶ್ವರ, ಹೊಸೂರಮ್ಮದೇವಿ, ವಡಕರಾಯ ರಂಗನಾಥ ಸ್ವಾಮಿ, ಕಣವಿರಾಯ, ಗ್ರಾಮ ದೇವತೆ ಊರಮ್ಮ ದೇವಿ, ನೀಲಕಂಠೇಶ್ವರ, ಸಣ್ಣಕ್ಕಿ ವೀರಭದ್ರೇಶ್ವರ, ರಾಮಲಿಂಗೇಶ್ವರ ಸೇರಿದಂತೆ ವಿವಿಧ ದೇಗುಲಗಳಿಗೆ ಭಕ್ತರು ತೆರಳಿ, ಪೂಜೆ ಸಲ್ಲಿಸಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಂಡೆ ರಂಗನಾಥ ಸ್ವಾಮಿ, ಕೊಟ್ಟೂರು ತಾಲೂಕಿನ ಕೊಟ್ಟೂರೇಶ್ವರ, ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ, ಕೊಮಾರನಹಳ್ಳಿ ತಾಂಡದ ಗುಡ್ಡದ ಮಲ್ಲಯ್ಯ, ಕುರವತ್ತಿ ಬಸವೇಶ್ವರ, ಹರಪನಹಳ್ಳಿ ತಾಲೂಕಿನ ಉಚ್ಚಂಗಿ ದುರ್ಗಾದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಯಿತು. ದೇವಸ್ಥಾನಗಳಲ್ಲಿ ಪುರಾಣ, ಪ್ರವಚನ, ಭಜನೆ, ದೇವರ ನಾಮಗಳ ಸ್ತೋತ್ರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆದವು. ಭಕ್ತರು ಸರದಿ ಸಾಲಿನಲ್ಲಿ ನಿಂತು, ದೇವರ ದರ್ಶನ ಪಡೆದು, ಹೂ, ಹಣ್ಣು, ಕಾಣಿಕೆ ಸಲ್ಲಿಸಿ, ಭಕ್ತಿ ಮೆರೆದರು.

ಪಂಚಲಿಂಗಗಳ ದರ್ಶನ:

ಶ್ರಾವಣ ಮಾಸದ ಪ್ರಯುಕ್ತ ಪಂಪಾ ಮಹಾತ್ಮೆಯಲ್ಲಿ ಉಲ್ಲೇಖಿತ ಐದು ಲಿಂಗಗಳು ದರ್ಶನವು ಉತ್ತರದ ಕಾಶಿವಿಶ್ವನಾಥನ ಕಾಶಿಕ್ಷೇತ್ರಕಿಂತಲು ಒಂದು ಗುಲಗಂಜಿ ಹೆಚ್ಚೆಂದು ವೇದವ್ಯಾಸರ ಪುರಾಣದಲ್ಲಿದೆ.

ಶ್ರೀ ಹಂಪಿ ವಿರೂಪಾಕ್ಷನ ಈ ಪಂಪಾಕ್ಷೇತ್ರದ ಮಹಿಮೆಗಳು ಇನ್ನು ಅಪಾರ ಈ ಪಂಪಾಕ್ಷೇತ್ರದ ಗಡಿಭಾಗಕ್ಕೆ ನಾಲ್ಕು ದಿಕ್ಕುಗಳಲ್ಲಿ ಒಂದೊಂದು ಅವತಾರದಲ್ಲಿ ಶ್ರೀ ವಿರೂಪಾಕ್ಷನು ನೆಲೆಸಿದ್ದಾನೆ. ಈ ನಾಲ್ಕು ಅಂಗಗಳ ದರ್ಶನ ವಿರೂಪಾಕ್ಷನ ದರ್ಶನದಷ್ಟೇ ಶ್ರೇಷ್ಠವಾದುದು. ಈ ವಿರೂಪಾಕ್ಷನ ಸ್ಥಾನಗಳು ಕವಿವರ್ಯರಿಂದಲೂ ಸ್ತುತಿಸಲ್ಪಟ್ಟಿವೆ. ಹರಿಹರನ ಮಹಾಕಾವ್ಯ ಗಿರಿಜಾಕಲ್ಯಾಣದಲ್ಲಿ ವಿರೂಪಾಕ್ಷನನ್ನು ಹಂಪಿಯಾಳ ಇಲ್ಲದೆ ಹಂಪಿಯರಸನೆಂದು ಹೇಳಲಾಗಿದೆ.

ಈ ಕವಿ ಪಂಪಾಪುರದ ಮೇರೆಗಳನ್ನು ತಿಳಿಸುತ್ತ ಮೂಡಣ ಬಾಗಿಲಲ್ಲಿ ಕಿನ್ನರೇಶ್ವರ, ತೆಂಕಣ ಬಾಗಿಲಲ್ಲಿ ಜಂಬುಕೇಶ್ವರ, ಪಶ್ಚಿಮ ಬಾಗಿಲಲ್ಲಿ ಸೋಮೇಶ್ವರ, ಉತ್ತರ ಬಾಗಿಲಲ್ಲಿ ವಾ(ಮಾ)ಣಿಭದ್ರೇಶ್ವರ ನೆಲೆಸಿದ್ದಾರೆಂದು ಹೇಳಿದ್ದಾನೆ. ಭಕ್ತರು ಶ್ರಾವಣ ಮಾಸದ ಪ್ರತಿ ಸೋಮವಾರ ಹಾಗೂ ಶಿವರಾತ್ರಿ ದಿನದಂದು ಒಂದೇ ದಿನದಲ್ಲಿ ಈ ನಾಲ್ಕು ಅಂಗಗಳ ದರ್ಶನ ಮಾಡಿ, ಕೊನೆಯಲ್ಲಿ ಕೇಂದ್ರಸ್ಥಾನದಲ್ಲಿ ನೆಲೆಸಿರುವ ವಿರೂಪಾಕ್ಷನನ್ನು ದರ್ಶನ ಮಾಡಿದರೆ ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಪುರಾಣ ಪುಣ್ಯಕಥೆಗಳು ಹೇಳುತ್ತಿವೆ.

ಶ್ರಾವಣ ಮಾಸದ ಪ್ರಯುಕ್ತ ಭಕ್ತ ಮಹಾಜನರು ಪಂಚಲಿಂಗಗಳ ದರ್ಶನ ಮಾಡಿಕೊಳ್ಳಬೇಕು ಎಂದು ಕೋರಿರುವ ಶಾಸಕ ಎಚ್.ಆರ್. ಗವಿಯಪ್ಪ ಪ್ರತಿ ಶ್ರಾವಣ ಸೋಮವಾರ ದಿನದಂದು ವಿಶೇಷ ಬಸ್‌ ವ್ಯವಸ್ಥೆ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ