ಕೊಪ್ಪಳ: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಮತ ಎಣಿಕೆ ಕಾರ್ಯ ಜೂ. 4ರಂದು ನಡೆಯಲಿದ್ದು, ಅಂದು ಮತ ಎಣಿಕೆ ಕೇಂದ್ರದಲ್ಲಿ ಹಾಜರಿರುವ ಚುನಾವಣಾ ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಮತ ಎಣಿಕೆ ಪ್ರಕ್ರಿಯೆ ಹಾಗೂ ಮತ ಎಣಿಕೆ ಸಿಬ್ಬಂದಿಗೆ ತೊಂದರೆಯಾಗದಂತೆ ಶಿಸ್ತು ಪಾಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಕೌಂಟಿಂಗ್ ಏಜೆಂಟರ ನೇಮಕಾತಿಗಾಗಿ ನಮೂನೆ-18ರಲ್ಲಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು. ಗುರುತಿನ ಚೀಟಿ, ಪಾಸ್ ಹೊಂದಿರದ ಯಾವುದೇ ವ್ಯಕ್ತಿಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಮಾಡಲು ಅವಕಾಶವಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಪ್ರತ್ಯೇಕ ಬಣ್ಣದ ಪಾಸ್ ನೀಡಲಾಗುತ್ತದೆ. ಏಜೆಂಟರು ತಮಗೆ ನಿಗದಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿಂಗ್ ಕೊಠಡಿ ಬಿಟ್ಟು ಬೇರೆ ಕಡೆಗೆ ಹೋಗುವಂತಿಲ್ಲ. ಶಿಸ್ತು ಪಾಲಿಸದೇ ಇರುವ ಏಜೆಂಟರನ್ನು ಚುನಾವಣಾಧಿಕಾರಿ ಹೊರಗೆ ಹಾಕುವ ಅಧಿಕಾರ ಹೊಂದಿರುತ್ತಾರೆ. 58-ಸಿಂಧನೂರು, 59-ಮಸ್ಕಿ, 60-ಕುಷ್ಟಗಿ, 64-ಕೊಪ್ಪಳ ವಿಧಾನಸಭಾ ಕ್ಷೇತ್ರಗಳಿಗೆ ನೆಲ ಮಹಡಿಯಲ್ಲಿ, 61-ಕನಕಗಿರಿ, 62-ಗಂಗಾವತಿ, 63-ಯಲಬುರ್ಗಾ ಹಾಗೂ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವನ್ನು ಕಾಲೇಜಿನ ಮೊದಲನೇ ಮಹಡಿಯಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮತ ಎಣಿಕೆ ಪ್ರಕ್ರಿಯೆಯ ವೇಳೆ ನಿಗದಿಪಡಿಸಿದ ಕ್ರಮದಂತೆ ಏಜೆಂಟರು ಕುಳಿತುಕೊಳ್ಳಬೇಕು. ಪ್ರತಿಯೊಬ್ಬ ಎಣಿಕೆ ಏಜೆಂಟ್ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ತಾಳ್ಮೆಯಿಂದ ವರ್ತಿಸಬೇಕು. ಎಣಿಕೆ ಪ್ರಕ್ರಿಯೆ ಪ್ರಾರಂಭವಾಗುವುದಕ್ಕಿoತ ಮುಂಚೆ ಪ್ರಜಾ ಪ್ರಾತಿನಿಧ್ಯ ಕಾಯಿದೆ ಸೆಕ್ಷನ್ 128ರ ಪ್ರಕಾರ ಮತದಾನದ ರಹಸ್ಯ ಕಾಯ್ದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಬೇಕು. ಏಜೆಂಟರು ಕೇವಲ ಪೆನ್ನು ಮತ್ತು ಹಾಳೆ ತೆಗೆದುಕೊಂಡು ಬರಲು ಅವಕಾಶವಿದೆ. ಬರೆದುಕೊಳ್ಳಲು ನೋಟ್‌ಪ್ಯಾಡ್ ಮತ್ತು ಮತದಾನದ ದಿನದಂದು ಪ್ರಿಸೈಡಿಂಗ್ ಅಧಿಕಾರಿ ನೀಡಿರುವ 17-ಸಿ ಮತಪತ್ರಗಳ ಲೆಕ್ಕದ ಪ್ರತಿ ತೆಗೆದುಕೊಂಡು ಬರಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಅಭ್ಯರ್ಥಿಗಳಿಗೆ ತಿಳಿಸಿದರು.ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರಿಗೆ ಅವಕಾಶವಿಲ್ಲ. ಮೊಬೈಲ್ ಫೋನ್‌ಗಳ ಸಂಗ್ರಹಣಾ ಕೌಂಟರ್ ಇರುವುದಿಲ್ಲವಾದ್ದರಿಂದ ಫೋನ್‌ಗಳನ್ನು ತೆಗೆದುಕೊಂಡು ಬರುವಂತಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಚುನಾವಣಾ ತಹಸೀಲ್ದಾರ್ ರವಿಕುಮಾರ್ ವಸ್ತ್ರದ್, ಜಿಲ್ಲಾ ಪೊಲೀಸ್ ಡಿಎಸ್‌ಬಿ ಘಟಕದ ಪಿಐ ನಾಗರಾಜ ಆರ್. ಉಪಸ್ಥಿತರಿದ್ದರು.