ಧಾರವಾಡ:ಪ್ರತಿಯೊಂದು ಬೆಳೆಗೆ ನಿರ್ದಿಷ್ಟ ಪ್ರಮಾಣದಲ್ಲಿ ನೀರು ಹಾಯಿಸಿದರೆ ಮಾತ್ರ ನಾವು ಗರಿಷ್ಠ ಪ್ರಮಾಣದ ಇಳುವರಿ ಪಡೆಯಲು ಸಾಧ್ಯ. ನಮ್ಮಲ್ಲಿ ಯಥೇಚ್ಛವಾಗಿ ನೀರಿದೆ ಎಂದು ಬೇಕಾಬಿಟ್ಟಿ ನೀರು ಹರಿಸಿದರೆ ಸಸಿಗಳ ಬೇರುಗಳಿಗೆ ಹವೆ ದೊರಕದೆ ಹಾಳಾಗುವುದಲ್ಲದೇ ಮಣ್ಣು ಕೂಡ ತನ್ನ ಫಲವತತ್ತೆ ಕಳೆದುಕೊಳ್ಳುವ ಅಪಾಯವಿದೆ. ಇದನ್ನು ಅರಿತುಕೊಂಡು ರೈತರಿಗೆ ತರಬೇತಿ ನೀಡಲು ಮುಂದಾಗಬೇಕಿದೆ ಎಂದು ವಾಲ್ಮಿ ನಿರ್ದೇಶಕ ಪ್ರೊ. ಬಿ.ವೈ. ಬಂಡಿವಡ್ಡರ ಹೇಳಿದರು.
ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಲ್ಲಿ ಆರಂಭವಾದ ಐದು ದಿನಗಳ ಎಂಜಿನಿಯರ್‌ಗಳ ತರಬೇತಿ ಶಿಬಿರ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು.ಹೆಚ್ಚು ನೀರು ಮತ್ತು ಹೆಚ್ಚು ಗೊಬ್ಬರ ಹಾಕಿದರೆ ಸಿಕ್ಕಾಪಟ್ಟೆ ಸಮೃದ್ಧ ಬೆಳೆ ಸಿಗುತ್ತದೆ ಎಂಬ ತಪ್ಪು ಕಲ್ಪನೆ ರೈತರಲ್ಲಿದೆ. ಈ ಕಲ್ಪನೆಯನ್ನು ನಿವಾರಿಸಿ ಯಾವ ಬೆಳೆಗೆ ಎಷ್ಟು ಪ್ರಮಾಣದಲ್ಲಿ ನೀರು ಕೊಡಬೇಕು ಎಂಬುದನ್ನು ಅರಿತು ಅದರ ಪ್ರಕಾರವೇ ನೀರು ಹರಿಸಿದರೆ ಮಾತ್ರ ಉತ್ತಮ ಬೆಳೆ ತೆಗೆಯಲು ಸಾಧ್ಯ ಎಂದರು.
ಶಿಬಿರದಲ್ಲಿ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು, ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿಗಳು ಭಾಗವಹಿಸಿದ್ದು ಶಿಬಿರದಲ್ಲಿ ನೀರಾವರಿ ಅಣೆಕಟ್ಟುಗಳ ನಿರ್ಮಾಣ, ಅವುಗಳ ರಚನೆ, ಅಂದಾಜು ಪಟ್ಟಿ ತಯಾರಿಕೆ, ಕರ್ನಾಟಕ ನೀರಾವರಿ ಕಾಯ್ದೆ, ಸಹಭಾಗಿತ್ವ ನೀರಾವರಿ ಪದ್ಧತಿಯ ಮಹತ್ವ, ನೀರಿನ ಸಮರ್ಪಕ ಬಳಕೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಎಂಜಿನಿಯರ್‌ಗಳು ಕ್ಷೇತ್ರದಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಬೇಕು ಎಂದರು.ವಾಲ್ಮಿ ಸಮಾಲೋಚಕ ಡಾ. ವಿ.ಐ. ಬೆಣಗಿ, ಬೆಳೆ ಪದ್ಧತಿ ಮತ್ತು ನೀರು ನಿರ್ವಹಣೆಯ ಉಪನ್ಯಾಸ ನೀಡಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಶಾಂತ ಸಿ.ಎನ್. ಮಾತನಾಡಿದರು. ತರಬೇತಿ ಸಂಯೋಜಕ ಪ್ರೊ. ಚನ್ನಯ್ಯ ಕೊಪ್ಪದ ಸ್ವಾಗತಿಸಿದರು. ಫಕೀರೇಶ ಅಗಡಿ ನಿರೂಪಿಸಿದರು. 34 ಶಿಬಿರಾರ್ಥಿಗಳು ಭಾಗವಹಿಸಿದ್ದರು.