ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ೧೪ ರಿಂದ ೧೭ ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮೈಸೂರು ವಿಭಾಗಮಟ್ಟದ ಎರಡು ದಿನಗಳ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಹ್ಯಾಂಡ್ ಬಾಲ್ ಎಸೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಚಾಮರಾಜನಗರದಲ್ಲಿ ಆಯೋಜಿಸಲಾಗಿದೆ. ಹಾಸನ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಮಂಡ್ಯ ಜಿಲ್ಲೆಗಳಿಂದ ಆಗಮಿಸಿರುವ ಕ್ರೀಡಾಪಟುಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ನಾನು ಸಹ ಉತ್ತಮ ಕ್ರೀಡಾಪಟುವಾಗಿದ್ದು, ಹೆಚ್ಚಾಗಿ ಅಥ್ಲೇಟಿಕ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ. ಕ್ರೀಡೆಗಳಲ್ಲಿ ಆಸಕ್ತಿಯ ಜೊತೆಗೆ ಪರಿಶ್ರಮವಿದ್ದರೆ ಬಹುಮಾನಗಳು ಹಾಗೂ ಪ್ರಶಸ್ತಿಗಳು ಲಭಿಸುತ್ತವೆ ಎಂದರು.ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಲು ಸಮಯದ ಜೊತೆಗೆ ದೈಹಿಕ ಸಾಮರ್ಥ್ಯಕ್ಕೂ ಪ್ರಾಮುಖ್ಯತೆ ನೀಡಬೇಕು. ಕ್ರೀಡಾಪಟುಗಳು ಪ್ರಾಮಾಣಿಕವಾಗಿ ಆಟಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡಾ ಮನೋಭಾವ ಮೆರೆಯಬೇಕು. ಗೆಲುವು ಯಾವಾಗಲೂ ನಿಮ್ಮದೇ ಆಗಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಚಂದ್ರಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಹೊಂದಿರಬೇಕು. ಕ್ರೀಡೆಗಳು ಕೇವಲ ಮನೋರಂಜನೆಗಾಗಿ ಇರುವುದಲ್ಲ, ಬದಲಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಲು ಕ್ರೀಡೆಗಳಲ್ಲಿ ಭಾಗವಹಿಸಬೇಕು. ಗೆದ್ದವರು ಹಿಗ್ಗದೆ, ಸೋತವರು ಕುಗ್ಗದೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್. ಶಂಕರ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಚಿಕ್ಕ ಬಸವಯ್ಯ, ಜಿಲ್ಲೆಯ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಇದ್ದರು.