ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ತೆಪ್ಪೋತ್ಸವ ದಸರಾ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ತೆಪ್ಪೋತ್ಸವ ಬಾರಿ ಸಡಗರದೊಂದಿಗೆ ನಡೆಯಿತು. ವರ್ಷದಲ್ಲಿ ನಾಲ್ಕು ಬಾರಿ ನಡೆಯುವ ತೆಪ್ಪೋತ್ಸವ ಈ ಸಾಲಿನಲ್ಲಿ ದಸರಾ ಹಾಗೂ ಕಡೆ ಕಾರ್ತಿಕ ಸೋಮವಾರ ದೀಪಾವಳಿ ಜಾತ್ರೆ ಸೇರಿದಂತೆ ವರ್ಷದಲ್ಲಿ ಸಾಂಪ್ರದಾಯದಂತೆ ದೊಡ್ಡ ಕೆರೆಯಲ್ಲಿ ಜರುಗಲಿದೆ.ಕಣ್ಮಣ ಸೆಳೆಯುವ ದೀಪಾಲಂಕಾರ: ಶರವನ್ನ ರಾತ್ರಿ ದಸರಾ ಮಹೋತ್ಸವ ಅಂಗವಾಗಿ ನಡೆದ ತೆಪ್ಪೋತ್ಸವ ದೊಡ್ಡ ಕೆರೆಯ ಸುತ್ತಲಿನ ಪ್ರದೇಶದಲ್ಲಿ ವಿಶೇಷವಾಗಿ ದೀಪಾಲಂಕರವೂ ಭಕ್ತರ ಕಣ್ಮನ ಸೆಳೆಯಿತು. ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದಸರಾ ವಿಶೇಷ ಪೂಜಾ ಕಾರ್ಯಕ್ರಮಗಳ ಪ್ರಯುಕ್ತ ಶಾಲೂರು ಬೃಹನ್ ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನಿಧ್ಯದಲ್ಲಿ ಮಲೆ ಮಾದೇಶ್ವರ ಬೆಟ್ಟದ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಉತ್ಸವ ಮೂರ್ತಿ ಬಿಳಿ ಕುದುರೆಯ ಮೇಲೆ ಪಾರ್ವತಿ ಪರಶಿವನ ಉತ್ಸವ ಮೂರ್ತಿಯನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ತೆಪ್ಪೋತ್ಸವ ನಡೆಯುವ ಸ್ಥಳಕ್ಕೆ ಮೆರವಣಿಗೆ ಮೂಲಕ ಬಂದು ದೊಡ್ಡಕೆರೆಯಲ್ಲಿ ಅಲಂಕೃತಗೊಂಡಿದ್ದ ತೆಪ್ಪೋತ್ಸವದಲ್ಲಿ ದೇವರ ಮೂರ್ತಿಗಳನ್ನು ಅಲಂಕಾರಗೊಳಿಸಿ ಮೂರು ಪ್ರದಕ್ಷಿಣೆ ಹಾಕಲಾಯಿತು. ಬಾಣ ಬಿರುಸು ಹಾಗೂ ತಮಟೆ ವಾದ್ಯಗಳ ನಡುವೆ ಸಾಂಪ್ರದಾಯದಂತೆ ಬೇಡಗಂಪಣ ಸಮುದಾಯದ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ನೆರವೇರಿಸಿದರು.ವೀರಭದ್ರ ಸ್ವಾಮಿಗೆ ಆಭರಣಗಳ ಅಲಂಕಾರ:
ಮಲೆ ಮಾದೇಶ್ವರ ಬೆಟ್ಟದ ದೇವಾಲಯದ ಪ್ರಾರಂಭದಲ್ಲಿ ಇರುವ ವೀರಭದ್ರ ಸ್ವಾಮಿಗೆ ಸಾಂಪ್ರದಾಯದಂತೆ ವಿಜಯದಶಮಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷ ನಡೆಯುವ ಹಾಗೆ ಮಹಾರಾಜರು ನೀಡಿರುವ ಆಭರಣಗಳನ್ನು ಧರಿಸಿ ವಿಶೇಷ ಪೂಜೆ ಸಲ್ಲಿಸಿದರು.ಭಾರಿ ಭಕ್ತ ಸಮೂಹ:
ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆದ ವಿಜಯದಶಮಿ ಹಬ್ಬದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ತೆಪ್ಪೋತ್ಸವ ಮುನ್ನ ನಡೆದ ಚಿನ್ನದ ರಥೋತ್ಸವ ವೇಳೆಯಲ್ಲಿ ಭಕ್ತ ಸಮೂಹ ರಥೋತ್ಸವವನ್ನು ಎಳೆದು ಹರಕೆ ತೀರಿಸಿದರು.ಶಾಸಕ ಎಂ.ಆರ್. ಮಂಜುನಾಥ್ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಧರ್ಮೇಂದರ್, ಉಪ ಕಾರ್ಯದರ್ಶಿ ಚಂದ್ರಶೇಖರ್ ಇನ್ಸ್ಪೆಕ್ಟರ್ ಜಗದೀಶ್ ಸೇರಿದಂತೆ ಬೇಡಗಂಪಣ ಅರ್ಚಕರು ಉಪಸ್ಥಿತರಿದ್ದರು.ಆರು ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿರುವ ತೆಪ್ಪೋತ್ಸವಕ್ಕೆ ಸಕಲ ಸಿದ್ಧತೆಯನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತೆಪ್ಪೋತ್ಸವ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಬೋಟಿಂಗ್ ತೆಪ್ಪಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾಂಪ್ರದಾಯದಂತೆ ತೆಪ್ಪೋತ್ಸವವನ್ನು ನಡೆಸಲಾಗಿದೆ.
ಎ. ಇ. ರಘು, ಕಾರ್ಯದರ್ಶಿಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಾದೇಶ್ವರ ಬೆಟ್ಟ