ಕನ್ನಡಪ್ರಭ ವಾರ್ತೆ ಮಳವಳ್ಳಿ
ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಹೊರತುಪಡಿಸಿ ಮುಟ್ಟಿನ ಕಪ್ ಬಳಸುವ ಮೂಲಕ ಸುರಕ್ಷತೆ, ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ಮನೋಹರ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರ ಸಂಘ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಮುಟ್ಟಿನ ಕಪ್ ಬಳಕೆ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮತನಾಡಿದರು.
ತಿಂಗಳಿಗೊಮ್ಮೆ ಆಗುವ ಮುಟ್ಟಿನ ಸಮಯದಲ್ಲಿ ಪ್ಯಾಡ್‌ಗಳಿಂದ ಉಂಟಾಗುವ ಸಮಸ್ಯೆಗಳನ್ನು ದೂರ ಮಾಡಲು ಈಗಾಗಲೇ ಮಹಿಳೆಯರು ಮುಟ್ಟಿನ ಕಪ್‌ನ್ನು ಬಳಸಲು ಪ್ರಾರಂಭಿಸಿದ್ದಾರೆ. ಮುಟ್ಟಿನ ಕಪ್‌ನ್ನು ಮರುಬಳಕೆ ಮಾಡಬಹುದು ಎಂದರು.ಮಹಿಳೆಯರ ಆರೋಗ್ಯ ದೃಷ್ಟಿಯಿಂದ ತಾಲೂಕಿನ ಮಹಿಳೆಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ತರಬೇತಿ ಪಡೆದ ಆರೋಗ್ಯ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಮುಟ್ಟಿನ ಕಪ್ ಬಳಕೆ ಸಲಹೆ ನೀಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ, ತಾಪಂ ಇಒ ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಾಮಣಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಂತೋಷಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಸ್ತ್ರೀ ರೋಗ ತಜ್ಞರಾದ ಡಾ.ಶಿಲ್ಪ, ಡಾ.ಶ್ವೇತ, ಡಾ.ಜ್ಯೋತಿ ಜಯರಾಮ್, ಡಾ.ಲಕ್ಷ್ಮಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕೃಷಿ ಮತ್ತು ಪಶು ಸಖಿ, ಬಿಸಿ ಊಟದ ಸಿಬ್ಬಂದಿ, ಗ್ರಾಪಂ ಮಹಿಳಾ ಸದಸ್ಯರು, ಮಹಿಳಾ ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.