ರಾಮನಗರ: ಗುರು-ಶಿಷ್ಯರ ಸಂಬಂಧ ಭಕ್ತ-ಭಗವಂತ ಹಾಗೂ ತಂದೆ-ಮಗನ ಸಂಬಂಧ ಇದ್ದಂತೆ. ಈ ಪವಿತ್ರ ಸಂಬಂಧವನ್ನು ಕಾಪಾಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಸದೃಢ ಸಮಾಜ ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲೂ ಇದೆ. ಯಾರು ಎಷ್ಟೇ ಎತ್ತರಕ್ಕೆ ಬೆಳೆದರೂ ಅದರ ರೂವಾರಿಗಳು ನೀವೇ ಆಗಿರುತ್ತೀರಿ. ಗುರು ಇಲ್ಲದಿದ್ದರೆ ಯಾವುದೇ ಸಾಧನೆ ಅಸಾಧ್ಯ. ಜ್ಞಾನ ಸಂಪಾದನೆ ಮಾಡಿದಾಗ ಮಾತ್ರ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ನಮ್ಮ ದೇಶದಲ್ಲಿ ತಂದೆ-ತಾಯಿಗಿಂತಲೂ ಮಿಗಿಲಾದ ಸ್ಥಾನವನ್ನು ಗುರು ಪಡೆದಿದ್ದಾರೆ ಎಂದು ತಿಳಿಸಿದರು.
ತಮಿಳುನಾಡಿನ ಸಾಧಾರಣ ಕುಟುಂಬದಲ್ಲಿ ಜನಿಸಿದಂತಹ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿಕೊಂಡರು. ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನೂ ಅಲಂಕರಿಸಿದ್ದವರು. ಪರಿಶ್ರಮ, ಶ್ರದ್ಧೆ ಇದ್ದರೆ ಎಲ್ಲವೂ ಸಾಧ್ಯ. ಶಿಕ್ಷಣ ಇಲಾಖೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣ ಅವರು ಹಲವಾರು ಸುಧಾರಣೆಗಳನ್ನು ತಂದವರು. ಶಿಕ್ಷಣ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿದ್ದವರು. ಸಮಾಜ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ನಿಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಕುಮಾರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಇತರರಿದ್ದರು.
ಪಂಚಾಯಿತಿಗೊಂದು ಕೆಪಿಎಸ್ ಶಾಲೆ ಪ್ರಾರಂಭ
ಕೆಲವೊಂದು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. 3 ಮಕ್ಕಳಿಗೆ 2 ಶಿಕ್ಷಕರು ಪಾಠ ಮಾಡಬೇಕಾದ ಸ್ಥಿತಿ ಇದೆ. ಅಂತೆಯೇ ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಸಣ್ಣಪುಟ್ಟ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲಾಗುವುದು ಎಂದರು.
ಕೋಟ್ ................
- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ರಾಮನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಭಿನಂದಿಸಲಾಯಿತು.