ಕನ್ನಡಪ್ರಭ ವಾರ್ತೆ ರಾಮನಗರ
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ, ದಲಿತರ ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಬಿಜೆಪಿ- ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆ ರಾಮನಗರ ಜಿಲ್ಲೆಯಲ್ಲಿ ಮೂರು ದಿನ ಸಾಗಲಿದೆ.ಆ.೩ರಂದು ಕೆಂಗೇರಿಯಿಂದ ಆರಂಭಗೊಳ್ಳಲಿರುವ ಬಿಜೆಪಿ- ಜೆಡಿಎಸ್ ಜಂಟಿ ಪಾದಯಾತ್ರೆ ಬಿಡದಿ, ರಾಮನಗರ, ಚನ್ನಪಟ್ಟಣದ ಮೂಲಕ ಹಾದುಹೋಗಲಿದ್ದು, ಮೂರನೇ ದಿನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪ್ರವೇಶಿಸಲಿದೆ.
ಪ್ರತಿದಿನ ಸುಮಾರು ೧೬ ರಿಂದ ೨೨ ಕಿಮೀ ನಷ್ಟು ದೂರ ಪಾದಯಾತ್ರೆ ಸಾಗಲಿದ್ದು, ರಾತ್ರಿ ಒಂದು ಕಡೆ ತಂಗಿದ್ದ ನಂತರ ಮರುದಿನ ಮತ್ತೆ ಯಾತ್ರೆ ಶುರುವಾಗಲಿದೆ. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಊಟ, ತಿಂಡಿಗೆ ಹಾಗೂ ತಂಗಲು ವ್ಯವಸ್ಥೆ ಮಾಡಲಾಗಿದೆ.ಕೆಂಗೇರಿಯಲ್ಲಿ ಚಾಲನೆ:
ಆ.೩ರಂದು ಕೆಂಗೇರಿಯಲ್ಲಿ ಕಹಳೆ ಊದುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಸಾಗಲಿರುವ ಪಾದಯಾತ್ರೆಯು ರಾತ್ರಿ ಬಿಡದಿ ಪ್ರವೇಶಿಸಲಿದ್ದು, ಬಿಡದಿಯ ಮಂಜುನಾಥ ಕನ್ವೆನ್ಸನ್ ಹಾಲ್‌ನಲ್ಲಿ ಮೊದಲ ದಿನದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಡದಿಯಲ್ಲಿ ಎರಡನೇ ದಿನದ ಪಾದಯಾತ್ರೆಗೆ ತಮಟೆ ಹೊಡೆಯುವ ಮೂಲಕ ಚಾಲನೆ ನೀಡಲಾಗುವುದು. ಬಿಡದಿಯಿಂದ ರಾಮನಗರ ತಾಲೂಕು ಪ್ರವೇಶಿಸಲಿರುವ ಪಾದಯಾತ್ರೆಯು ಅಲ್ಲಿಂದ ಚನ್ನಪಟ್ಟಣ ಪ್ರವೇಶಿಸಲಿದ್ದು, ಶ್ರೀ ಕೆಂಗಲ್ ಆಂಜನೆಯ ಸ್ವಾಮಿ ದೇವಸ್ಥಾನದ ಬಳಿ ಇರುವ ಕೆವಿಕೆ ಕನ್ವೆನ್ಷನ್ ಹಾಲ್‌ನಲ್ಲಿ ಎರಡನೇ ದಿನದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಭೇಟಿ ನೀಡಿ ನಮಿಸಿದ ನಂತರ ಮೂರನೇ ದಿನದ ಪಾದಯಾತ್ರೆ ಆರಂಭಗೊಳ್ಳಲಿದ್ದು, ಚನ್ನಪಟ್ಟಣ ನಗರದ ಮೂಲಕ ಸಾಗಿ ನಿಡಘಟ್ಟದ ಬಳಿ ರಾತ್ರಿ ವಾಸ್ತವ್ಯ ಹೂಡಲಿದ್ದು, ಅಲ್ಲಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಪ್ರವೇಶಿಸಲಿದೆ.
ಮೂರುದಿನ ಪಾದಯಾತ್ರೆ:ಮೊದಲ ದಿನ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಪ್ರಾರಂಭಗೊಳ್ಳಲಿದ್ದು, ಸುಮಾರು ೧೬ ಕಿಮೀ ಕ್ರಮಿಸಿ ಬಿಡದಿಯ ಮಂಜುನಾಥ್ ಕನ್ವೆನ್ಷನ್ ಹಾಲ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ಎರಡನೇ ದಿನದ ಪಾದಯಾತ್ರೆ ಬಿಡದಿಯಿಂದ ಆರಂಭಗೊಂಡು ೨೨ ಕಿಮೀ ಸಾಗಿ ಚನ್ನಪಟ್ಟಣದ ಕೆಂಗಲ್ ಬಳಿಯ ಕೆವಿಕೆ ಕನ್ವೆನ್ಷನ್ ಹಾಲ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ಮೂರನೇ ದಿನ ಕೆಂಗಲ್‌ನಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು, ೨೦ ಕಿಮೀ ಸಾಗಿ ನಿಡಘಟ್ಟದ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್‌ನಲ್ಲಿ ವಾಸ್ತವ್ಯ ಹೂಡಲಿದೆ.
ಪಾದಯಾತ್ರೆ ಯಶಸ್ಸಿಗೆ ತಯಾರಿ:ಜಿಲ್ಲೆಯಲ್ಲಿ ಮೂರು ದಿನ ಸಾಗಲಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಜಿಲ್ಲೆಯ ಎರಡು ಪಕ್ಷಗಳ ಮುಖಂಡರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ಸಭೆಗಳನ್ನು ನಡೆಸಿ ಪಾದಯಾತ್ರೆ ಯಶಸ್ಸಿಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
ಐದು ಬ್ಲಾಕ್‌ನಲ್ಲಿ ಪಾದಯಾತ್ರೆ:ಇನ್ನು ಪಾದಯಾತ್ರೆ ಐದು ಬ್ಲಾಕ್‌ನಲ್ಲಿ ಸಾಗಲಿದೆ. ಎ ಬ್ಲಾಕ್‌ನಲ್ಲಿ ಧ್ವನಿವರ್ಧಕ ಜೀಪ್, ಪಾದಯಾತ್ರೆ ಬ್ಯಾನರ್, ಕಲಾತಂಡ, ಪಾದಯಾತ್ರೆ ತಂಡ, ೨ ಕಲರ್ ಧ್ವಜ ಇರಲಿವೆ. ಬಿ ಬ್ಲಾಕ್‌ನಲ್ಲಿ ಟ್ಯಾಬ್ಲೋ, ಡಿಜೆ ವಾಹನ ಮಾಧ್ಯಮ, ರಾಜ್ಯ ಅಧ್ಯಕ್ಷರ ತಂಡ, ಮಹಿಳಾ ತಂಡ, ೫೦ ದೊಡ್ಡ ಧ್ವಜಗಳೊಂದಿಗೆ ಪಾದಯಾತ್ರೆ ತಂಡ ಸಾಗಲಿದೆ. ಸಿ ಬ್ಲಾಕ್‌ನಲ್ಲಿ ಡಿ.ಜೆ.ವಾಹನ, ೫೦ ದೊಡ್ಡ ಧ್ವಜಗಳು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ೧೦೦೦ ಜನರ ಪಾದಯಾತ್ರೆ ತಂಡ ಸಾಗಲಿದೆ. ಡಿ ಬ್ಲಾಕ್‌ನಲ್ಲಿ ರಿಲ್ಯಾಕ್ಸ್ ವಾಹನ, ಸಾಮಗ್ರಿ ವಾಹನ, ಕುಡಿಯುವ ನೀರು, ಆ್ಯಂಬುಲೆನ್ಸ್ ಹಾಗೂ ಇ ಬ್ಲಾಕ್‌ನಲ್ಲಿ ವೈಯಕ್ತಿಕ ವಾಹನ ಸ್ವಚ್ಛತಾ ವಾಹನ ಸಾಗಲಿದೆ.
ಊಟ, ತಿಂಡಿಗೆ ಟೈಮ್ ಟೇಬಲ್:ಇನ್ನು ಆ.೩ರಂದು ಮೊದಲ ದಿನ ಕೆಂಗೇರಿಯಲ್ಲಿ ೧೦ ಗಂಟೆಗೆ ಮೊದಲ ದಿನದ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ. ಆ ನಂತರ ಪ್ರತಿದಿನ ಪಾದಯಾತ್ರಿಗಳಿಗೆ ಬೆಳಗ್ಗೆ ೬.೩೦ಕ್ಕೆ ಕಾಫಿ, ಟೀ ವ್ಯವಸ್ಥೆ, ೭.೩೦ಕ್ಕೆ ಬೆಳಗ್ಗಿನ ಉಪಹಾರ ನೀಡಿದ ನಂತರ ಪ್ರತಿದಿನ ೮.೪೫ಕ್ಕೆ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ.
ಬೆಳಗ್ಗೆ ೧೦.೪೫ಕ್ಕೆ ಒಮ್ಮೆ ಕಾಫಿ, ಟೀ ವ್ಯವಸ್ಥೆಯ ನಂತರ ಮಧ್ಯಾಹ್ನ ೧೨.೩೦ರಿಂದ ೩ ಗಂಟೆಯವರೆಗೆ ಭೋಜನ ವಿರಾಮವಿರಲಿದೆ. ೩.೩೦ಕ್ಕೆ ಪಾದಯಾತ್ರೆ ಪುನಾರಂಭಗೊಂಡು ೫ ಗಂಟೆಗೆ ಕಾಫಿ, ಟೀಗೆ ಬ್ರೇಕ್ ನೀಡಲಾಗುವುದು. ರಾತ್ರಿ ೮ ಗಂಟೆಗೆ ನಿಗದಿತ ಸ್ಥಳದಲ್ಲಿ ಭೋಜನದ ನಂತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.ಉಪಚುನಾವಣೆ ಹಿನ್ನೆಲೆ ಮಹತ್ವ ಪಡೆದ ಪಾದಯಾತ್ರೆ:
ಇನ್ನು ಜಿಲ್ಲೆಯಲ್ಲಿ ಹಾದುಹೋಗಲಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆಗೆ ಉಪಚುನಾವಣೆ ನಡೆಬೇಕಿದೆ. ಯಾವಾಗ ಬೇಕಾದರೂ ಉಪಚುನಾವಣೆಯ ದಿನಾಂಕ ಘೋಷಣೆಯಾಗಬಹುದು ಎಂಬ ವಾತಾವರಣವಿದೆ. ಇದೇ ಹೊತ್ತಿನಲ್ಲಿ ಚನ್ನಪಟ್ಟಣದ ಮೂಲಕ ಪಾದಯಾತ್ರೆ ಸಾಗಲಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪಾದಯಾತ್ರೆಯಿಂದ ಮೈತ್ರಿ ಪಕ್ಷಕ್ಕೆ ಯಾವ ರೀತಿಯ ಲಾಭವಾಗಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆದಿದೆ.