ಭಾರಿ ಮಳೆಗೆ ಮೆಕ್ಕೆಜೋಳ ಹಾಳು: ಪರಿಹಾರ ನೀಡಲು ರೈತ ಸಂಘ ಆಗ್ರಹ

KannadaprabhaNewsNetwork |  
Published : Oct 24, 2024, 12:42 AM IST
ಮಳೆ ರೈತರ ಎಲ್ಲ ಬೆಳೆಗಳು ನಾಶ,-1 | Kannada Prabha

ಸಾರಾಂಶ

ಶಿರಾಳಕೊಪ್ಪ ಹತ್ತಿರದ ಬಿಳಿಕಿ ಗ್ರಾಮಗಳಲ್ಲಿ ಮೆಕ್ಕಜೋಳದ ತೆನೆಯಲ್ಲಿ ನೀರು ಹೊಕ್ಕು ತೆನೆಯಲ್ಲಿಯೇ ಸಸಿ ಆಗಿರುವದು.

ಕನ್ನಡಪ್ರಭವಾರ್ತೆ ಶಿರಾಳಕೊಪ್ಪ

ಅತಿಯಾದ ಹಿಂಗಾರು ಮಳೆಯಿಂದ ಬೆಳೆಗಳು ಹಾಳಾಗಿದ್ದು, ತಕ್ಷಣ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕೆಂದು ರಾಜ್ಯ ರೈತ ಸಂಘ ಆಗ್ರಹಿಸಿದೆ.

ಮಂಗಳವಾರ ನಡೆದ ರೈತ ಸಂಘದ ಪದಾಧಿಕಾರಿಗ ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಈರಣ್ಣ ಪ್ಯಾಟಿ, ಪ್ರಾರಂಭದಲ್ಲಿ ಮುಂಗಾರು ಮಳೆ ಹೆಚ್ಚಾಗಿ ಸಮಸ್ಯೆ ಆಗಿತ್ತು. ನಂತರ ಬೆಳೆಗಳು ಚೆತರಿಸಿಕೊಂಡು ರೈತ ನಿಟ್ಟುಸಿರು ಬಿಡುತ್ತಿರುವಾಗಲೇ ಹಿಂಗಾರು ಅತಿವೃಷ್ಟಿಯಿಂದ ರೈತರು ಕಂಗೆಟ್ಟಿದ್ದಾರೆ ಎಂದು ಹೇಳಿದರು.

ಶಿಕಾರಿಪುರ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ರೈತರ ಕೈಹಿಡಿದಿತ್ತು. ಆದರೆ ಪ್ರಾರಂಭದಲ್ಲಿ ಸಾಕಷ್ಟು ಬೆಳೆ ಹಾಳಾಗಿ ಉಳಿದ ಬೆಳೆ ಉತ್ತಮವಾಗಿವೆ ಎನ್ನುತ್ತಿರುವಾಗಲೇ ಈಗಿನ ಎಡಬಿಡದ ಮಳೆಯಿಂದಾಗಿ ಮೆಕ್ಕೆಜೋಳದ ತೆನೆಯಲ್ಲಿ ನೀರು ಹೊಕ್ಕು ಸಸಿ ಎದ್ದು ರೈತರ ನಿದ್ದೆಗೆಡಿಸಿದೆ. ಹಾಗೆಯೇ ಭತ್ತಕ್ಕೆ ಕಂದುಜಿಗಿ ಹುಳುವಿನ ಕಾಟದಿಂದಾಗಿ ಸಾಕಷ್ಟು ರೈತರ ಬೆಳೆ ಹಾಳಾಗಿವೆ. ಈ ಬಾರಿ ಜೋಳವೂ ಇಲ್ಲ, ಭತ್ತವೂ ಇಲ್ಲ ಎಂಬಂತಾಗಿದೆ. ಈ ನಡುವೆ ಅಡಕೆಗೆ ಕೊಳೆರೋಗ ತಗಲಿ ಅದುಸಹ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ತಕ್ಷಣ ರೈತರ ಸಹಾಯಕ್ಕೆ ಬಂದು ವಿಮೆ ಸೇರಿ ರೈತರಿಗೆ ದೊರಕುವ ಎಲ್ಲ ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಈರಣ್ಣ ಪ್ಯಾಟಿ ಆಗ್ರಹಿಸಿದರು.

ಕಾರ್ಯಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ಕಳೆದ ಬಾರಿಯೂ ರೋಗಕ್ಕೆ ತುತ್ತಾಗಿದ್ದ ಅಡಿಕೆ ಬೆಳೆಗಾರರಿಗೆ ವಿಮೆ ಮಾಡಿಸಿದರೂ ಈವರೆಗೆ ಬೆಳೆ ವಿಮೆ ಬಿಡುಗಡೆ ಆಗಿಲ್ಲ. ಎರಡೂ ವರ್ಷದ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ತಾಲೂಕು ಕೃಷಿ ಕಚೇರಿ ಬಳಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿಕಾರಿಪುರ ತಾಲೂಕು ರಾಜ್ಯ ರೈತಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಿಗಳನ್ನು ತಕ್ಷಣ ಗ್ರಾಮಕ್ಕೆ ಕಳುಹಿಸಿ ಬೆಳೆ ಮಹಜರ್ ಮಾಡಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಕೃಷಿ ಇಲಾಖೆ ಕೊಟ್ಟ ಮಾಹಿತಿಯಂತೆ ತಾಲೂಕಲ್ಲಿ ಈ ಬಾರಿ 19500 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, 3750 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಹಾಳಾಗಿರುವ ಅಂದಾಜನ್ನು ಕೃಷಿ ಮತ್ತು ಕಂದಾಯ ಇಲಾಖೆ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಆದರೆ ಅಕ್ಟೋಬರ್‌ನಲ್ಲಿ ವಾಡಿಕೆಯಂತೆ 87 ಮಿಮೀ. ಮಳೆ ಇದ್ದು, ಆದರೆ 254 ಮಿಮೀ ಮಳೆ ಆಗಿದೆ. 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಕಟಾವಿಗೆ ಬಂದಿದ್ದು ತೆನೆಗಳು ಹಸಿ ಆಗಿ ಮೊಳಕೆ ಒಡೆದು ಸಂಪೂರ್ಣ ಹಾಳಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ ಎಂದರು.

ಹಾಗೆಯೇ 10,500 ಹೆಕ್ಟೇರ್‌ನಲ್ಲಿ ಬೆಳೆದ ಭತ್ತದ ಬೆಳೆ ಹೂವು ಆಗುತ್ತಿದ್ದು, ಮಳೆ ಹೊಡೆತಕ್ಕೆ ಸಂಪೂರ್ಣ ಜೊಳ್ಳಾಗುವ ಸಂಭವವಿದೆ. ಜೊತೆಗೆ ನುಸಿರೋಗ ದಿಂದ ಭತ್ತದ ಬೆಳೆ ಬರುವದು ಅನುಮಾನ ಎನ್ನಲಾಗುತ್ತಿದೆ ಎಂದರು.

ಶಿರಾಳಕೊಪ್ಪ ಹತ್ತಿರದ ಬಿಳಿಕಿ ಗ್ರಾಮಗಳಲ್ಲಿ ಮೆಕ್ಕಜೋಳದ ತೆನೆಯಲ್ಲಿ ನೀರು ಹೊಕ್ಕು ತೆನೆಯಲ್ಲಿಯೇ ಸಸಿ ಆಗಿರುವದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!