ಲಕ್ಷ್ಮೇಶ್ವರದಲ್ಲಿ 2ನೇ ದಿನಕ್ಕೆ ಮೆಕ್ಕೆಜೋಳ ರೈತರ ಹೋರಾಟ

KannadaprabhaNewsNetwork |  
Published : Nov 17, 2025, 01:30 AM IST
ಪೊಟೋ- ಲಕ್ಷ್ಮೇಶ್ವ ರ ಪಟ್ಟಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಳಕ್ಕೆ ಮಾಜಿ ಶಅಸಕ ಜಿ.ಎಸ್.,ಗಡ್ಡದೇವರಮಠ ಬೇಟಿ ನೀಡಿ ರೈತರಿಗೆ ದೈರ್ಯ ತುಂಬುವ ಕಾರ್ಯ ಮಾಡುತ್ತಿರುವುದು.  | Kannada Prabha

ಸಾರಾಂಶ

ಭಾನುವಾರ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು.

ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು, ರೈತರಿಗೆ ಬೆಳೆವಿಮೆ, ಬೆಳೆಹಾನಿ ಪರಿಹಾರ ಜಮೆ ಮಾಡಬೇಕು ಎಂಬ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ಹಲವಾರು ರೈತ ಸಂಘಟನೆಗಳು ಕೈಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿರಿಸಿದ್ದು, ವಿವಿಧ ಪಕ್ಷಗಳ ಮುಖಂಡರು ಭೇಟಿ ನೀಡಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸುತ್ತಿದ್ದು, ರೈತರ ಹೋರಾಟಕ್ಕೆ ಮತ್ತಷ್ಟು ಪುಷ್ಟಿ ದೊರಕಿದಂತಾಗಿದೆ.ಭಾನುವಾರ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರು ಧರಣಿ ನಿರತ ಸ್ಥಳಕ್ಕೆ ಬೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ನಂತರ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ರೈತಪರ ಹೋರಾಟವಾಗಿದ್ದು, ರೈತರ ಬೇಡಿಕೆಗಳು ನ್ಯಾಯಯುತವಾಗಿವೆ. ರೈತರಿಗೆ ನೈತಿಕವಾಗಿ ಬೆಂಬಲ ನೀಡುವದು ನಮ್ಮ ಕರ್ತವ್ಯವಾಗಿದೆ ಎಂದರು.

ಈ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸುವುದು ಅಗತ್ಯವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ಸೂಕ್ತ ಬೆಲೆ ದೊರಕಿದರೆ ರೈತರು ನೆಮ್ಮದಿಯಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸಂಬಂಧಿಸಿದ ಕೃಷಿ ಸಚಿವರು, ಉಸ್ತುವಾರಿ ಸಚಿವರು, ಸಿಎಂ, ಡಿಸಿಎಂ, ಅಧಿಕಾರಿಗಳನ್ನು ಭೇಟಿ ಮಾಡಿ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿ ಅನುಕೂಲ ಮಾಡಿಕೊಡುವಂತೆ ಒತ್ತಡ ಹೇರುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.ಕೆಪಿಸಿಸಿ ಕಾರ್ಯದರ್ಶಿ ಹಿರಿಯ ಮುಖಂಡ ಟಿ. ಈಶ್ವರ ಅವರು ಸಹ ಬೇಟಿ ನೀಡಿ ಬೆಂಬಲ ಘೋಷಿಸಿ ಮಾತನಾಡಿ, ರೈತರ ನೋವು ನಮಗೂ ಅರ್ಥವಾಗುತ್ತದೆ, ಹಗಲು- ರಾತ್ರಿ, ಮಳೆ, ಬಿಸಿಲು ಎನ್ನದೆ ದೇಶದ ಜನರಿಗೆ ಅನ್ನನೀಡುವ ನಿಟ್ಟಿನಲ್ಲಿ ಬೆವರು ಹರಿಸಿ ದುಡಿಯುವ ರೈತರಿಗೆ ಬೆಳೆ ಬಂದ ವೇಳೆ ಇಂಥ ಪರಿಸ್ಥಿತಿ ಬರುತ್ತಿರುವುದು ನಿಜಕ್ಕೂ ಖೇದಕರ ಸಂಗತಿ.ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮನವಿ ಮಾಡುತ್ತೇವೆ. ರೈತರೊಂದಿಗೆ ನಾವಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದ್ದು, ನಿಮ್ಮ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ ಎಂದರು.

ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ತಾಲೂಕು ಅಧ್ಯಕ್ಷ ಟಾಕಪ್ಪ ಸಾತಪೂತೆ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರುವ ಸರ್ಕಾರಗಳು ಇದೀಗ ಸಂಕಷ್ಟದಲ್ಲಿರುವ ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಬೆಳೆವಿಮೆ- ಬೆಳೆಹಾನಿ ಪರಿಹಾರ ಕಲ್ಪಿಸಬೇಕು ಎಂದು ಲಕ್ಷ್ಮೇಶ್ವರದಲ್ಲಿ ಸಮಗ್ರ ರೈತ ಹೋರಾಟ ಸಂಘಟನೆಗಳು ಪಕ್ಷಾತೀತವಾಗಿ ಕಳೆದ ೨ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿರುವ ರೈತರ ಕೂಗು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಅದಕ್ಕಾಗಿ ಹೋರಾಟದ ಸ್ವರೂಪ ಇನ್ನೂ ತೀವ್ರಗೊಳಿಸಬೇಕಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಸಮಗ್ರ ರೈತ ಹೋರಾಟ ಸಂಘಟನೆಗಳ ಒಕ್ಕೊರಲ ಬೇಡಿಕೆಯಾಗಿದೆ ಎಂದರು.ಹೋರಾಟದ ನೇತೃತ್ವವಹಿಸಿದ್ದ ಮಂಜುನಾಥ ಮಾಗಡಿ, ಎಂ.ಎಸ್. ದೊಡ್ಡಗೌಡ್ರ, ನಾಗರಾಜ ಚಿಂಚಲಿ, ವಕೀಲ ರವಿಕಾಂತ ಅಂಗಡಿ, ಪೂರ್ಣಾಜಿ ಖರಾಟೆ, ಬಸವರಾಜ ಬೆಂಡಿಗೇರಿ, ಸುರೇಶ ಹಟ್ಟಿ, ಶಿವಾನಂದ ಬನ್ನಿಮಟ್ಟಿ, ಸಿದ್ದು ಹವಳದ, ಗಂಗಾಧರ ಗೋಡಿ, ಗಿರೀಶ ಕಳ್ಳಿಮನಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಪ್ಪ ಷಣ್ಮುಖಿ, ಬಸವರಾಜ ಮೇಲ್ಮುರಿ, ಪ್ರವೀಣ ನೆಲೊಗಲ್, ಅಮರೇಶ ತೆಂಬದಮನಿ, ನೀಲಪ್ಪ ಶರಸೂರಿ, ಮಲ್ಲಯ್ಯ ಮೂಲಿಮಠ, ಪ್ರಭು ಮತ್ತಿಕಟ್ಟಿ, ಗಂಗಾಧರ ಖರಾಟೆ, ರಮೇಶ ದೊಡ್ಡೂರ, ಮಲ್ಲೇಶ ಒಡ್ಡರ, ಮುದಕಣ್ಣ ಗದ್ದಿ ಸೇರಿದಂತೆ ಅನೇಕರಿದ್ದರು.

PREV

Recommended Stories

ಕೆಎಲ್ಇ ಶಿಕ್ಷಣ ಜತೆಗೆ ಸಂಸ್ಕಾರ ನೀಡಿದ ಸಂಸ್ಥೆ
ಸಾಲುಮರದ ತಿಮ್ಮಕ್ಕನವರ ಪ್ರಕೃತಿ ಪ್ರೇಮ ಎಲ್ಲರಿಗೂ ಆದರ್ಶ: ಶಾಸಕಿ ಅನ್ನಪೂರ್ಣ