ಗದಗ: ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲು ಕೇಂದ್ರ ಸರ್ಕಾರವು ನವೆಂಬರ್‌ನಲ್ಲಿಯೇ ಅನುಮತಿ ನೀಡಿದ್ದರೂ ಈ ವಿಷಯವನ್ನು ಮುಚ್ಚಿಟ್ಟು ರೈತರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನಿಗದಿಪಡಿಸಿದ್ದರೂ ಈವರೆಗೆ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಆಡಳಿತದಲ್ಲಿ ಬಿಕ್ಕಟ್ಟು ಎದುರಾದಾಗ ಆವರ್ತನಿಧಿ ಬಳಸಿ ರೈತ ಉತ್ಪನ್ನಗಳನ್ನು ಖರೀದಿಸಿ, ನಂತರ ಕೇಂದ್ರದಿಂದ ಮರುಪಾವತಿ ಪಡೆಯುವ ಅವಕಾಶವಿದ್ದರೂ ರಾಜ್ಯ ಸರ್ಕಾರ ಅದನ್ನು ಬಳಸುತ್ತಿಲ್ಲ. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಆವರ್ತನಿಧಿ ಶೂನ್ಯಕ್ಕೆ ತಲುಪಿದೆ. ಗ್ಯಾರಂಟಿಗಳ ನೆಪದಲ್ಲಿ ರೈತ ವರ್ಗಕ್ಕೆ ಸರ್ಕಾರ ನಾನಾ ವಿಧಗಳಿಂದ ಮೋಸ ಮಾಡುತ್ತಿದೆ ಎಂದು ಆಪಾದಿಸಿದರು.ಈ ಹಿಂದೆ ಹಾನಿಗೊಳಗಾದ ಹೆಸರು ಉತ್ಪನ್ನವನ್ನು ಖರೀದಿಸಲು ಕೂಡ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸಲಹೆ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಕಳುಹಿಸಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಜೋಳ, ಮೆಕ್ಕೆಜೋಳ, ಹೆಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಂಬಲ ಬೆಲೆಯನ್ನು ₹1 ಸಾವಿರದಿಂದ ₹3 ಸಾವಿರದ ವರೆಗೆ ಹೆಚ್ಚಿಸಲಾಗಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಕೇಂದ್ರದಿಂದ ಅನುಮತಿ ಸಿಕ್ಕಿದ್ದರೂ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ರೈತರನ್ನು ವಂಚಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಶಿವು ಹಿರೇಮನಿ ಪಾಟೀಲ, ಲಿಂಗರಾಜ ಪಾಟೀಲ, ಕೋಟಿಗೌಡರ್ ಇತರರು ಉಪಸ್ಥಿತರಿದ್ದರು.ಬುರುಡೆ ಗ್ಯಾಂಗ್ ಪರ ಮೃದುಧೋರಣೆಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಜಗದೀಶ ಶೆಟ್ಟರ್, ಬುರುಡೆ ಬಿಟ್ಟ ಗ್ಯಾಂಗ್ ಪರವಾಗಿ ರಾಜ್ಯ ಸರ್ಕಾರ ಮೃದುಧೋರಣೆ ತೋರಿದ್ದು ಸ್ಪಷ್ಟವಾಗಿದೆ. ಕಮ್ಯುನಿಸ್ಟರು ಹೇಳಿದಂತೆ ಸಿದ್ದರಾಮಯ್ಯ ಕೇಳಿದ್ದಾರೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ದೊಡ್ಡ ಹುನ್ನಾರಕ್ಕೆ ಕೈಹಾಕಿದ ಗ್ಯಾಂಗ್‌ಗೆ ತಕ್ಕ ಶಿಕ್ಷೆಯಾಗಬೇಕು. ಆ ನಿಟ್ಟಿನಲ್ಲಿ ಕಾನೂನುಗಳ ಪಾಲನೆ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಯಾರ ಮೇಲೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.