ಮೆಕ್ಕೆಜೋಳ ಬೆಲೆ ಪಾತಳಕ್ಕಿಳಿದರೂ ತೆರೆಯದ ಬೆಂಬಲ ಬೆಲೆ ಕೇಂದ್ರ

KannadaprabhaNewsNetwork |  
Published : Oct 19, 2025, 01:00 AM IST
18ಕೆಪಿಎಲ್21 ಕೊಪ್ಪಳ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತ ಮೆಕ್ಕೆಜೋಳ ಮಾರಾಟ ಮಾಡಲು ಬಂದು ಮೆಕ್ಕೆಜೋಳ ಲೋಡ್ ಮೇಲೆಯೇ ಮಲಗಿರುವುದು. | Kannada Prabha

ಸಾರಾಂಶ

ಕೊಪ್ಪಳ ಮಾರುಕಟ್ಟೆಯಲ್ಲಿ 1 ಲಕ್ಷ ಕ್ವಿಂಟಲ್‌ಗೂ ಅಧಿಕ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ₹1800ಗೆ ಕುಸಿದಿದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತಲೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಪಾತಳಕ್ಕೆ ಕುಸಿದಿದೆ. ರೈತರು ಕಂಗಾಲಾಗಿದ್ದಾರೆ. ಇಷ್ಟಾದರೂ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳಕ್ಕೆ ಬರೋಬ್ಬರಿ ₹2400 ಘೋಷಣೆ ಮಾಡಿದೆ. ಇಷ್ಟು ದರಕ್ಕೆ ಮಾರುಕಟ್ಟೆ ಸಿಕ್ಕರೆ ರೈತರ ಸಂತಸಕ್ಕೆ ಪಾರವೇ ಇರುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣ ಮುಂದೆ ಮಾಡಿ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಇಳಿಸಿದ್ದಾರೆ. ಇದರಿಂದ ರೈತರು ಕಂಗೆಟ್ಟು ಹೋಗಿದ್ದಾರೆ.

ಹೌದು, ಕೊಪ್ಪಳ ಮಾರುಕಟ್ಟೆಯಲ್ಲಿ 1 ಲಕ್ಷ ಕ್ವಿಂಟಲ್‌ಗೂ ಅಧಿಕ ಆವಕವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ₹1800ಗೆ ಕುಸಿದಿದೆ. ಇಷ್ಟು ದರಕ್ಕೆ ಮಾರಿದರೆ ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಅಷ್ಟಕ್ಕೂ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ರೈತರು ತಪಸ್ಸು ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಲಾಲಿ ಅಂಗಡಿಯಲ್ಲಿ ಮೆಕ್ಕೆಜೋಳ ಮಾರಾಟ ಮಾಡಲು ಸರದಿಯಲ್ಲಿ ಹಗಲು ರಾತ್ರಿ ನಿಲ್ಲಬೇಕು. ಮಾರುಕಟ್ಟೆಯಲ್ಲಿ ದರ ನಿಗದಿಯಾದ ಬಳಿಕವೇ ಬ್ರೀಡ್ಜ್ ಕಾಟಾ ಮಾಡಲು ಮತ್ತೆ ಹೆಣಗಾಡಬೇಕು. ಇದಕ್ಕಾಗಿ ಹಗಲು, ರಾತ್ರಿ ಎನ್ನದೆ ಕಾಯುತ್ತಾ ತಂದಿರುವ ಮೆಕ್ಕೆಜೋಳ ಲೋಡ್ ಮೇಲೆ, ಟ್ರ್ಯಾಕ್ಟರ್‌ನಲ್ಲಿಯೇ ಮಲಗಿಕೊಳ್ಳಬೇಕು. ಅಂತಹ ದುಸ್ಥಿತಿ ರೈತರದ್ದಾಗಿದೆ. ಇದಕ್ಕಾಗಿ ರೈತರು ಟ್ರ್ಯಾಕ್ಟರ್‌ ಬಾಡಿಗೆ ಹೆಚ್ಚುವರಿಯಾಗಿ ತೆರಬೇಕು.

ಸರ್ಕಾರದ ನಿರ್ಲಕ್ಷ್ಯ:ಬೆಂಬಲ ಬೆಲೆ ನಿಯಮದಂತೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ಕುಸಿತವಾದ ತಕ್ಷಣ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾಗಬೇಕು. ಆದರೆ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತವಾಗಿದೆ. ಆದರೂ ಇದುವರೆಗೂ ಬೆಂಬಲ ಬೆಲೆ ಕೇಂದ್ರ ತೆರೆಯದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃತಕ ಬೆಲೆ ಕುಸಿತ:ಮೆಕ್ಕೆಜೋಳಕ್ಕೆ ಬೇಡಿಕೆ ಇದೆಯಾದರೂ ಆವಕ ಹೆಚ್ಚಳವಾಗಿದೆ ಎನ್ನುವ ಕಾರಣಕ್ಕಾಗಿಯೇ ದಲ್ಲಾಳಿಗಳು ಮೆಕ್ಕೆಜೋಳ ದರ ಕುಸಿಯುವಂತೆ ಮಾಡಿದ್ದಾರೆ. ಬೇಡಿಕೆ ಇಲ್ಲ ಎಂದು ಸಬೂಬ ನೀಡಿ, ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ ನಾಲ್ಕು ನೂರು ರುಪಾಯಿ ಕುಸಿತ ಮಾಡಿದ್ದಾರೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ:ಮೆಕ್ಕೆಜೋಳ ಬೆಲೆ ಕುಸಿತವಾಗಿದ್ದರಿಂದ ಬೆಂಬಲ ಬೆಲೆ ಕೇಂದ್ರ ತೆರೆಯುವುದಕ್ಕೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದುವರೆಗೂ ಪ್ರಸ್ತಾವನೆಗೆ ಅನುಮತಿ ಸಿಗದೆ ಇರುವುದರಿಂದ ಬೆಂಬಲ ಬೆಲೆ ಕೇಂದ್ರ ತೆರೆಯಲು ಆಗಿಲ್ಲ.

ಮೆಕ್ಕೆಜೋಳ ದರ ಕುಸಿತದಿಂದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು. ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ರೈತ ಮುಖಂಡ ಭೋಜಪ್ಪ ಕುಂಬಾರ ತಿಳಿಸಿದ್ದಾರೆ.

ಮೆಕ್ಕೆಜೋಳ ಬೆಲೆ ಕುಸಿತವಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ತಕ್ಷಣ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ತಿಳಿಸಿದ್ದೇನೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಮೆಕ್ಕೆಜೋಳ ಬೆಂಬಲ ಬೆಲೆ ಕೇಂದ್ರ ತೆರೆಯುವುದಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಕಳಹಿಸಲಾಗಿದ್ದು, ಸರ್ಕಾರದಿಂದ ಸೂಚನೆ ಬರುತ್ತಿದ್ದಂತೆ ಪ್ರಾರಂಭಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ