ಖಾಲಿ ಹುದ್ದೆಗಳ ವಿವರ ಸಾರ್ವಜನಿಕಗೊಳಿಸಿ

KannadaprabhaNewsNetwork |  
Published : Oct 19, 2025, 01:00 AM IST
18ಡಿಡಬ್ಲೂಡಿ2ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಧಾರವಾಡದಲ್ಲಿ ಏರ್ಪಡಿಸಿದ್ದ ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳ ಆಗ್ರಹ ಸಮಾವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಮಾತನಾಡಿದರು.   | Kannada Prabha

ಸಾರಾಂಶ

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ ಭರ್ತಿ ಮಾಡುತ್ತಿಲ್ಲ. ಹುದ್ದೆಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆಯದಕ್ಕೆ ಬಳಸಲಾಗುತ್ತಿದೆ, ಇದು ಯಾವ ರಾಜನೀತಿ?.

ಧಾರವಾಡ:

ಸರ್ಕಾರಿ ಹುದ್ದೆಗಳು ಎಷ್ಟು ಖಾಲಿ ಇವೆ? ಹೊಸದಾಗಿ ಎಷ್ಟು ಹುದ್ದೆ ಸೃಜಿಸಲಾಗಿದೆ? ಎಷ್ಟು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂಬ ವಿವರವನ್ನು ಪ್ರತಿ ವರ್ಷ ಸರ್ಕಾರವು ಸಾರ್ವಜನಿಕರಿಗೆ ತಿಳಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಪ್ರಶ್ನಿಸಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಆದರೆ, ಸರ್ಕಾರ ಭರ್ತಿ ಮಾಡುತ್ತಿಲ್ಲ. ಹುದ್ದೆಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆಯದಕ್ಕೆ ಬಳಸಲಾಗುತ್ತಿದೆ, ಇದು ಯಾವ ರಾಜನೀತಿ? ಎಂಬ ಪ್ರಶ್ನೆಯನ್ನು ಅವರು ಹಾಕಿದರು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಇಲ್ಲಿಯ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಉದ್ಯೋಗಾಕಾಂಕ್ಷಿ ಪ್ರತಿನಿಧಿಗಳ ಆಗ್ರಹ ಸಮಾವೇಶದಲ್ಲಿ ಮಾತನಾಡಿದ ಅವರು, ಹುದ್ದೆಗಳ ಭರ್ತಿಗೆ ಹಣಕಾಸು ಇಲ್ಲ ಎಂದು ಸರ್ಕಾರ ಹೇಳುತ್ತದೆ. ಹಾಗಾದರೆ, ಅದಕ್ಕೆ ಮೀಸಲಿಟ್ಟ ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಸಂಸ್ಥೆಗಳಿಗೆ ಬೇಕಾಗುವ ಹುದ್ದೆಗಳು ಮತ್ತು ಅನುದಾನಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗದಿಂದ ಮಾಹಿತಿ ಪಡೆದು ನೇಮಕಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಉದ್ಯೋಗಾರ್ಥಿಗಳನ್ನು ನಿರಾಸೆಗೊಳಿಸುವುದು ಸರಿಯಲ್ಲ. ಉದ್ಯೋಗಾರ್ಥಿಗಳ ಬಗ್ಗೆ ಸರ್ಕಾರಗಳು ಕಾಳಜಿ ವಹಿಸುತ್ತಿಲ್ಲ. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸರ್ಕಾರಕ್ಕೆ ತಿಳಿವಳಿಕೆ ಬರುವಂತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದ ಅವರು, ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯುವ ನಿಮ್ಮ ಪ್ರಯತ್ನದಲ್ಲಿ ಜತೆ ಇರುತ್ತೇನೆ ಎಂಬ ಭರವಸೆ ನೀಡಿದರು.

ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಯೋಚನೆ ಮಾಡದೆ ಮಾಡುವ ಹೋರಾಟ ಅಪಾಯಕಾರಿ. ಹೋರಾಟ ಯೋಜನಾಬದ್ಧವಾಗಿ ಮತ್ತು ವ್ಯವಸ್ಥಿತವಾಗಿರಬೇಕು. ಹೋರಾಟಗಾರರು ನೈತಿಕತೆ ರೂಢಿಸಿಕೊಳ್ಳಬೇಕು. ಸಾಮೂಹಿಕ ನಿರ್ಧಾರ ಮತ್ತು ಕ್ರಿಯೆಗಳಿಂದ ಹೋರಾಟ ಮುಂದುವರಿಸಬಹುದು. ಹೋರಾಟ ಬೆಳೆಸಲು ಹೊಸ ಮಾದರಿ ಸೃಷ್ಟಿಸಬೇಕು ಎಂದರು.

ಹೋರಾಟ ಸಮಿತಿಯ ಕಾರ್ಯದರ್ಶಿ ಚೆನ್ನಬಸವ ಜಾನೇಕಲ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸಲಹೆಗಾರ ಜಿ.ಎಸ್. ಕುಮಾರ್, ಮುಖಂಡರಾದ ಸಿದ್ದಲಿಂಗ ಬಾಗೇವಾಡಿ, ಭವಾನಿಶಂಕರ ಗೌಡ, ವೀರೇಶ್ ನರೇಗಲ್ ಇದ್ದರು.

ರಾಜ್ಯದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಪ್ರತಿನಿಧಿಗಳು ಈಚೆಗೆ ಸಂಬಳವನ್ನು ಶೇ. 100ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ನೀಡುತ್ತಾರೆ. ನಂತರ, ಇಷ್ಟ ಬಂದಂತೆ ಆಡಳಿತ ನಡೆಸುತ್ತಾರೆ.

ಸಂತೋಷ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌