ಗದಗ: ನಗರದಲ್ಲಿ ನವಂಬರ್ ತಿಂಗಳಲ್ಲಿ ನಡೆಯುವ ಅತಿರುದ್ರ ಮಹಾಯಜ್ಞ ಎಲ್ಲರ ಕಲ್ಲಾಣಕ್ಕಾಗಿ ಜರುಗಲಿದೆ. ಇದರಿಂದ ಎಲ್ಲರಿಗೂ ಸುಖ-ಶಾಂತಿ, ನೆಮ್ಮದಿ, ಸಮೃದ್ಧಿ ದೊರಕಲಿದೆ ಎಂದು ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು ಹೇಳಿದರು.
2025ನೇ ಸಾಲಿನಲ್ಲಿ ಜರುಗಿದ ಮಹಾ ಕುಂಭಮೇಳದಲ್ಲಿ ಅಧುನಿಕ ಪ್ರಚಾರದಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಅಲ್ಲದೆ, ಕರ್ನಾಟಕದಿಂದ ಅತಿ ಹೆಚ್ಚು ಜನರು ಪಾಲ್ಗೊಂಡಿರುವುದು ವಿಶೇಷ. ಅದೇ ರೀತಿ ನಗರದಲ್ಲಿ ನಡೆಯುವ ಮಹಾಯಜ್ಞದಿಂದ ಗದಗ ನಗರ ಪಾವನಗೊಳ್ಳಲಿದೆ. ಈ ಮಹಾಯಜ್ಞದಲ್ಲಿ ಭಾಗವಹಿಸುವ ಸಾಧುಗಳು ಶ್ರೀಮಂತರಲ್ಲ, ಸ್ಥಿತಿವಂತರಲ್ಲ. ಆದರೆ, ಅವರು ಮಹಾನ್ ಸಾಧಕರಾಗಿದ್ದಾರೆ. ಅವರ ಆಶೀರ್ವಾದಿಂದ ಎಲ್ಲರ ಜೀವನ ಪಾವನವಾಗಲಿದೆ ಎಂದರು.
ಅತಿರುದ್ರ ಮಹಾಯಜ್ಞ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹಿಮಾಲಯದಲ್ಲಿ ಜೀವಮಾನ ತಪಸ್ಸು ಮಾಡಿ, ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ನಗರಕ್ಕೆ ನಾಗಾಸಾಧುಗಳು ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ನಮ್ಮ ಸೌಭಾಗ್ಯವು ಆಗಿದೆ. ಈ ಯಜ್ಞವನ್ನು ನಾವೆಲ್ಲರೂ ಅದ್ಧೂರಿಯ ಜತೆಗೆ ಅರ್ಥಪೂರ್ಣವಾಗಿ ಮಾಡಬೇಕಿದೆ. ಜಿಲ್ಲೆಯ ಎಲ್ಲ ತಾಲೂಕಿನ ಜನರು ಭಕ್ತಿ-ಭಾವದಿಂದ ಭಾಗವಹಿಸುವಂತೆ ನೋಡಿಕೊಳ್ಳಬೇಕು ಮತ್ತು ಇದು ಗದಗ ಜಿಲ್ಲೆಯ ಜನತೆಯ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಯಜ್ಞವಾಗಿರುವುದರಿಂದ ನಾವೆಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಅತಿರುದ್ರ ಮಹಾಯಜ್ಞ ಸಮಿತಿ ಅಧ್ಯಕ್ಷ ಕಿರಣ ಭೂಮಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ರವಿ ದಂಡಿನ, ಸಚಿನ ಡಿ. ಪಾಟೀಲ, ರಾಜು ಕುರಡಗಿ, ಬಸವರಾಜ ಬಿಂಗಿ, ಪ್ರಕಾಶ ಬೊಮ್ಮನಹಳ್ಳಿ, ವಿನೋದ ಶಿದ್ಲಿಂಗ್, ರುದ್ರಣ್ಣ ಗುಳಗುಳಿ, ಆರ್.ಡಿ. ಕಡ್ಲಿಕೊಪ್ಪ, ಸಂತೋಷ ಚನ್ನಪ್ಪನವರ, ರಾಘು ಭಾರಡ, ಎಂ.ಸಿ. ಐಲಿ, ಶ್ರೀನಿವಾಸ ಬಾಂಡಗೆ, ವಿಜಯಲಕ್ಷ್ಮೀ ಮಾನ್ವಿ, ಪ್ರೀತಿ ಹೊನ್ನಗುಡಿ ಇದ್ದರು. ಪ್ರೊ. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಚ್. ಶಿವನಗೌಡ್ರ ವಂದಿಸಿದರು.