ಕೊಯ್ಲಿಗೆ ಬಂದ ಮೆಕ್ಕೆಜೋಳ ತೆನೆಯಲ್ಲೇ ಮೊಳಕೆ

KannadaprabhaNewsNetwork |  
Published : Oct 20, 2024, 02:04 AM IST
ಹೂವಿನಹಡಗಲಿ ತಾಲೂಕಿನ ಉಪನಾಯಕಹಳ್ಳಿಯಲ್ಲಿ ಮಳೆಗೆ ಹಾನಿಯಾಗಿರುವ ಮೆಕ್ಕೆಜೋಳ, ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ ಮಲೆಗೆ ಮಣ್ಣಿನ ಮನೆ ಕುಸಿದು ಬಿದ್ದಿರುವುದು. | Kannada Prabha

ಸಾರಾಂಶ

ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನಲ್ಲಿ ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಕೊಯ್ಲಿಗೆ ಬಂದಿದ್ದ ಬೆಳೆಗಳು ಜಮೀನುಗಳಲ್ಲೇ ಕೊಳೆತು ಅಪಾರ ಹಾನಿ ಅನುಭವಿಸುವಂತಾಗಿದೆ.

ಈಗಾಗಲೇ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು, ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ರೈತರಿಂದ ನಷ್ಟದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಬಾರಿ 46 ಸಾವಿರ ಎಕರೆಯಷ್ಟು ಮೆಕ್ಕೆಜೋಳ ಬಿತ್ತನೆಯಾಗಿತ್ತು. 4 ಸಾವಿರ ಎಕರೆ ಭತ್ತದ ಬೆಳೆ ನಾಟಿಯಾಗಿತ್ತು. ಬಿತ್ತನೆ ನಂತರದ ಕಾಲದಲ್ಲಿ ಮಳೆ ಬಂದು ಬೆಳೆಗಳೆಲ್ಲಾ ಚೆನ್ನಾಗಿದ್ದು ರೈತರು ಖುಷಿಯಲ್ಲಿದ್ದರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ, ನಿರಂತರ ಮಳೆ ಸಂಕಷ್ಟ ತಂದಿದೆ. ಬೆಳೆದು ನಿಂತಿದ್ದ ಬೆಳೆ ಭಾರಿ ಪ್ರಮಾಣದ ಮಳೆ ಗಾಳಿಗೆ ಹಾನಿಯಾಗಿದೆ. ಕೈ ಸೇರಿದ್ದ ಬೆಳೆ ನೆಲದ ಪಾಲಾಗಿದೆ.

ತಾಲೂಕಿನ ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಅಂಗೂರು, ಕೋಟಿಹಾಳು, ನವಲಿ, ಹೊನ್ನೂರು ಸೇರಿದಂತೆ ಇತರೆ ಭಾಗಗಳಲ್ಲಿ ನಾಟಿಯಾದ ಭತ್ತ ಈಗಾಗಲೇ ತೆನೆಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಭಾರಿ ಗಾಳಿಗೆ ಭತ್ತದ ಬೆಳೆ ನೆಲಕಚ್ಚಿದೆ. ಜಮೀನಿನಲ್ಲಿ ನಿಂತ ನೀರಿನಲ್ಲೇ ಭತ್ತ ನೆನೆದು ಮೊಳಕೆ ಒಡೆಯುತ್ತಿವೆ.

ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ಒಕ್ಕಲುತನ ಮಾಡಲು, ಬಿಡುವು ನೀಡದಂತೆ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ತಾಲೂಕಿನ ಉತ್ತಂಗಿ, ಕೆಂಚಮ್ಮನಹಳ್ಳಿ, ತಳಕಲ್ಲು, ಇಟ್ಟಗಿ, ಮಹಾಜನದಹಳ್ಳಿ ಸೇರಿದಂತೆ ಇತರೆ ಪ್ರದೇಶಳಲ್ಲಿ 800 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಈಗಾಗಲೇ ಶೇ.60ರಷ್ಟು ಈರುಳ್ಳಿ ಕಟಾವು ಆಗಿದೆ. ಉಳಿದ ಈರುಳ್ಳಿ ಬೆಳೆ ಮಳೆಯಿಂದ ತೇವಾಂಶ ಹೆಚ್ಚಾಗಿ, ಈರುಳ್ಳು ಗಡ್ಡೆ ಕೊಳೆಯುತ್ತಿವೆ. ಜತೆಗೆ ಜಮೀನುಗಳಲ್ಲಿ ಕಿತ್ತು ಹಾಕಿದ್ದ ಈರುಳ್ಳಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ಕುರಿತು ತೋಟಗಾರಿಕೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಲೂಕಿನಲ್ಲಿ ಸುರಿದ ಮಳೆಗೆ 22 ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಮೆಕ್ಕೆಜೋಳ, ಭತ್ತ, ಈರುಳ್ಳಿ ಬೆಳೆ ಹಾನಿಯನ್ನು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ಕಾರ್ಯ ಶುರುವಾಗಿದೆ. ವರದಿ ಬಂದ ಕೂಡಲೇ ಸರ್ಕಾರಕ್ಕೆ ಮಾಹಿತಿ ಕಳಿಸುತ್ತೇವೆ ಎನ್ನುತ್ತಾರೆ ತಹಸೀಲ್ದಾರ್‌ ಜಿ.ಸಂತೋಷಕುಮಾರ್‌.

ತಾಲೂಕಿನ ನದಿ ತೀರ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಬೆಳೆ ಮಳೆ ಗಾಳಿಗೆ ನೆಲಕಚ್ಚಿದೆ. ಜತೆಗೆ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ಕುರಿತು ಅಧಿಕಾರಿಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮುಹಮ್ಮದ್‌ ಅಶ್ರಫ್‌.ನಿರಂತರ ಮಳೆಯಿಂದ ಮೆಕ್ಕೆಜೋಳ ತೆನೆ ನೀರಿನಲ್ಲಿ ನೆನೆದು ಮೊಳಕೆ ಒಡೆದು ಹಾನಿಯಾಗುತ್ತಿವೆ. ಜಮೀನುಗಳಲ್ಲಿ ಕೊಯ್ಲು ಮಾಡಲು ಆಗುತ್ತಿಲ್ಲ. ಕೂಡಲೇ ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುತ್ತಾರೆ ಉಪನಾಯಕನಹಳ್ಳಿ ರೈತ ರುದ್ರಪ್ಪ ಬೆನ್ನೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ