ಪೊಲೀಸರ ಭರ್ಜರಿ ಕಾರ್ಯಾಚರಣೆ, ₹3 ಕೋಟಿಗೂ ಅಧಿಕ ವಸ್ತುಗಳ ಜಪ್ತಿ

KannadaprabhaNewsNetwork |  
Published : Aug 18, 2026, 02:30 AM IST
ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಪತ್ತೆಯಾದ ಆಭರಣಗಳನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಗದಗ: ಜಿಲ್ಲೆಯಲ್ಲಿ ನಡೆದಿದ್ದ ನಾನಾ ಕಳ್ಳತನ, ದರೋಡೆ, ವಂಚನೆ ಹಾಗೂ ಮೊಬೈಲ್ ಕಳವು ಪ್ರಕರಣಗಳನ್ನು ಜಿಲ್ಲಾ ಪೊಲೀಸರು ಭರ್ಜರಿಯಾಗಿ ಭೇದಿಸಿದ್ದು, ಬರೋಬ್ಬರಿ ₹3 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ಸೋಮವಾರ ಒಂದೇ ಸೂರಿನಡಿ, ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ನೇತೃತ್ವದಲ್ಲಿ ಮೂಲ ವಾರಸುದಾರರಿಗೆ ಹಸ್ತಾಂತರಿದರು.

ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸರು ನಡೆಸಿದ ಸರಣಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕಳುವಾಗಿದ್ದ ಚಿನ್ನ, ಬೆಳ್ಳಿ, ವಾಹನ, ನಗದು ಹಾಗೂ ಮೊಬೈಲ್‌ ಗಳನ್ನು ಮಾಲೀಕರಿಗೆ ಅಧಿಕೃತವಾಗಿ ಮರಳಿಸಲಾಯಿತು.

ಪ್ರಕರಣವಾರು ವಿವರ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 68 ಪ್ರಕರಣಗಳ ಪೈಕಿ 51 ಪ್ರಕರಣಗಳನ್ನು ಭೇದಿಸಿ, 95 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 16563977(₹1.65 ಕೋಟಿ) ಮೌಲ್ಯದ 1.73 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಿ ಆಭರಣ ಹಾಗೂ ನಗದು ವಿಷಯವಾಗಿ ವಿವಿಧ ಪ್ರಕರಣಗಳಲ್ಲಿ ಕಳುವಾಗಿದ್ದ 83.61 ಲಕ್ಷ ಮೌಲ್ಯದ 55.85 ಕೆಜಿ ಬೆಳ್ಳಿ ಪೈಕಿ ₹60.52 ಲಕ್ಷ ಮೌಲ್ಯದ 37.19 ಕೆ.ಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ ಕಳುವಾಗಿದ್ದ ₹27.31 ಲಕ್ಷ ನಗದಿನಲ್ಲಿ ₹9.98 ಲಕ್ಷ ನಗದನ್ನು ಪೊಲೀಸರು ರಿಕವರಿ ಮಾಡಿದ್ದಾರೆ.

ಮೋಸ ಮತ್ತು ವಂಚನೆಯಡಿ ದಾಖಲಾಗಿದ್ದ 32 ಪ್ರಕರಣಗಳ ಪೈಕಿ 27 ಪ್ರಕರಣ ಭೇದಿಸಿ 35 ಆರೋಪಿಗಳನ್ನು ಬಂಧಿಸಲಾಗಿದೆ. ವಂಚನೆಗೊಳಗಾಗಿದ್ದ ಒಟ್ಟು ₹1.22 ಕೋಟಿ ಮೊತ್ತದಲ್ಲಿ 37.13 ಲಕ್ಷ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನ ಕಳವು: ವಾಹನ ಕಳವು ವಿಷಯದಲ್ಲಿ ದಾಖಲಾದ 36 ಪ್ರಕರಣಗಳ ಪೈಕಿ 23 ಪ್ರಕರಣಗಳನ್ನು ಭೇದಿಸಿದ್ದು, 16 ಆರೋಪಿಗಳನ್ನು ಬಂಧಿಸಲಾಗಿದೆ. ಗದಗ ಹಾಗೂ ನೆರೆ ಜಿಲ್ಲೆಗಳಲ್ಲಿ ಕಳುವಾಗಿದ್ದ ₹17.13 ಲಕ್ಷ ಮೌಲ್ಯದ ಒಟ್ಟು 40 ವಾಹನಗಳನ್ನು ಜಪ್ತಿ ಮಾಡಲಾಗಿದೆ.

965 ಮೊಬೈಲ್ ಪತ್ತೆ: ಜಿಲ್ಲೆಯಲ್ಲಿ ಕಳವು ಆಗಿ ದೂರು ದಾಖಲಾಗಿದ್ದ 1440 ಮೊಬೈಲ್‌ಗಳ ಪೈಕಿ ₹97.19 ಲಕ್ಷ ಮೌಲ್ಯದ 965 ಮೊಬೈಲ್‌ಗಳನ್ನು ತಾಂತ್ರಿಕವಾಗಿ ಪತ್ತೆಹಚ್ಚಿ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಡಿವೈಎಸ್ಪಿಗಳಾದ ಮುರ್ತುಜಾ ಖಾದ್ರಿ, ವಿದ್ಯಾನಂದ ನಾಯಕ, ಪ್ರಭುಗೌಡ ಕಿರೆದಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಇದ್ದರು. ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ಗಡೇದ ನಿರೂಪಿಸಿದರು.

ಮಾಲೀಕರ ಮೊಗದಲ್ಲಿ ಮಂದಹಾಸ...

ನಗರದ ಸಂಭಾಪುರ ರಸ್ತೆಯಲ್ಲಿನ ಪೊಲೀಸ್ ಭವನ ಅಕ್ಷರಶಃ ಪೊಲೀಸ್ ಹಬ್ಬವಾಗಿ ಮಾರ್ಪಟ್ಟಿತ್ತು. ಎಲ್ಲಿ ನೋಡಿದರೂ ಬಂಗಾರದ ಆಭರಣಗಳು, ಅವುಗಳು ಮುಂದೆ ಸಂತೃಪ್ತ ಭಾವದಿಂದ ಆಭರಣಗಳನ್ನೇ ನೋಡುತ್ತಾ ನಿಂತಿದ್ದ ಮಾಲೀಕರು, ಮಾಲೀಕರ ಮೊಗದಲ್ಲಿನ ಖುಷಿ ತರಲು ರಾತ್ರಿ ಹಗಲು ಎನ್ನದೇ ಶ್ರಮಿಸಿದ ಪೊಲೀಸ್ ಸಿಬ್ಬಂದಿ ಶ್ರಮದ ಸಾರ್ಥಕ ಭಾವ ಎಲ್ಲವೂ ಒಂದೇ ಸೂರಿನಡಿ ಕಂಡುಬಂದಿತು. ಇದಕ್ಕೆಲ್ಲ ಕಾರಣವಾಗಿದ್ದು ಎಸ್ಪಿ ರೋಹನ್ ಜಗದೀಶ ನೇತೃತ್ವದಲ್ಲಿ ಒಂದು ಟೀಂ ವರ್ಕ್ ಮಾಡಿದ ಹಿನ್ನೆಲೆ ಇದೆಲ್ಲ ಸಾಧ್ಯವಾಗಿದೆ ಎನ್ನುತ್ತಲೇ ಕಿರಿಯ ಅಧಿಕಾರಿಗಳು ಸಂಭ್ರಮಿಸಿದರು.

ಅಂತಾರಾಜ್ಯ ಕಳ್ಳತನ ಜಾಲ: ಜಿಲ್ಲೆಯ ಸ್ಥಳೀಯ ಪ್ರಕರಣಗಳಷ್ಟೇ ಅಲ್ಲದೆ, ಅಂತಾರಾಜ್ಯ ಕಳ್ಳತನ ಜಾಲವನ್ನೂ ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಕಳವು ಮಾಲು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಹಗಲಿರುಳು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಲಾಖೆಯ ವತಿಯಿಂದ ಸನ್ಮಾನ ಮಾಡಲಾಗುವುದು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಎಲ್‌ಸಿ–ಎಚ್‌ಎಲ್‌ಸಿ ಕಾಲುವೆಗಳಿಗೆ ಜಂಟಿ ನೀರು ಹರಿಸಲು ಆಗ್ರಹ
ಪೊಲೀಸ್‌ ಸರ್ಪಗಾವಲಿನಲ್ಲಿ ಬಸವರಾಜ ರೆಡ್ಡಿ ಅಂತ್ಯಸಂಸ್ಕಾರ