ಮಕರ ಸಂಕ್ರಾಂತಿ: ಶಿಕಾರಿಪುರದಲ್ಲಿ ಎಳ್ಳು-ಬೆಲ್ಲ ಹಂಚಿದ ಯಡಿಯೂರಪ್ಪ

KannadaprabhaNewsNetwork | Published : Jan 16, 2024 1:46 AM

ಸಾರಾಂಶ

ಮಕರ ಸಂಕ್ರಮಣ ಹಿನ್ನಲೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ಧಾವಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಕಚೇರಿಯಲ್ಲಿ ಸ್ಥಳೀಯ ಹಾಗೂ ಪರಸ್ಥಳದ ನೂರಾರು ಕಾರ್ಯಕರ್ತರನ್ನು ಭೇಟಿಯಾದರು. ಸಂಜೆ ವೇಳೆಯಲ್ಲಿ ಆತ್ಮೀಯ, ಹಳೆಯ ಕಾರ್ಯಕರ್ತ ಹಾಗೂ ಆರೆಸ್ಸೆಸ್‌ ಹಿರಿಯ ಸ್ವಯಂಸೇವಕ ಹಾಗೂ ಕನ್ನಡಪ್ರಭ ವರದಿಗಾರರೂ ಆಗಿರುವ ಅಂಗಡಿ ರಾಮಣ್ಣ ಅವರನ್ನು ಭೇಟಿಯಾಗಿದರು. ಎಳ್ಳುಬೆಲ್ಲ ಹಂಚಿದ ಅವರು, ಅಭಿಮಾನಿಗಳ ಜತೆ ಫೋಟೋಗಳನ್ನು ತೆಗೆಸಿಕೊಂಡರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಮಕರ ಸಂಕ್ರಮಣ ಹಿನ್ನಲೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ಧಾವಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಕಚೇರಿಯಲ್ಲಿ ಸ್ಥಳೀಯ ಹಾಗೂ ಪರಸ್ಥಳದ ನೂರಾರು ಕಾರ್ಯಕರ್ತರನ್ನು ಭೇಟಿಯಾದರು.

ಸಂಜೆ ವೇಳೆಯಲ್ಲಿ ಆತ್ಮೀಯ, ಹಳೆಯ ಕಾರ್ಯಕರ್ತ ಹಾಗೂ ಆರೆಸ್ಸೆಸ್‌ ಹಿರಿಯ ಸ್ವಯಂಸೇವಕ ಹಾಗೂ ಕನ್ನಡಪ್ರಭ ವರದಿಗಾರರೂ ಆಗಿರುವ ಅಂಗಡಿ ರಾಮಣ್ಣ ಅವರನ್ನು ಭೇಟಿಯಾಗಿದರು. ಅಂಗಡಿ ಮುಂಭಾಗದ ಜಗಲಿ ಮೇಲೆ ಕುಳಿತು ಪಕ್ಷ ಸಂಘಟನೆ ಆರಂಭದ ಸಂದರ್ಭದಲ್ಲಿ ಜತೆಗಿದ್ದವರ ನೆನಪಿಸಿಕೊಂಡರು. ಸುದೀರ್ಘ ಕಾಲದ ಈ ಸುಸಂದರ್ಭಕ್ಕೆ ಮನಸ್ಸು ಕಾತುರಗೊಂಡಿದ್ದಾಗಿ ಎಲ್ಲರ ಜತೆ ಸವಿನೆನಪು ಹಂಚಿಕೊಂಡರು.

ಹಬ್ಬದ ಅಂಗವಾಗಿ ಭಾನುವಾರ ಪುತ್ರಿ ಉಮಾ ಕುಟುಂಬಸ್ಥರ ಜತೆಗೆ ಸ್ವಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಿದ್ದ ಯಡಿಯೂರಪ್ಪ ಅವರು ಮಾಳೇರಕೇರಿಯ ಪಕ್ಷದ ಕಚೇರಿಯಲ್ಲಿ ನೂರಾರು ಕಾರ್ಯಕರ್ತರು, ಮಾಜಿ ಸಚಿವ ರೇಣುಕಾಚಾರ್ಯ, ಕಾಂತೇಶ್ ಸಹಿತ ಅಕ್ಕಪಕ್ಕದ ತಾಲೂಕಿನ ಪಕ್ಷದ ಮುಖಂಡರು ಮತ್ತಿತರ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಅಹವಾಲುಗಳನ್ನು ಸಂಯಮದಿಂದ ಆಲಿಸಿದರು. ಮಧ್ಯದಲ್ಲಿ ಸಮೀಪದ ಬ್ಯಾಡಗಿ ಬಳಿಯ ಚಿಕ್ಕಬಾಸೂರಿನಲ್ಲಿ ನೊಳಂಬ ವೀರಶೈವ ಸಮಾಜ ವತಿಯಿಂದ ನಡೆದ ಸಿದ್ದರಾಮೇಶ್ವರರ ರಾಜ್ಯಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ, ಸ್ಥಳೀಯ ಶಾಸಕರೂ ಆಗಿರುವ ವಿಜಯೇಂದ್ರ ಜತೆ ತೆರಳಿ, ಸಂಜೆ ವೇಳೆಯಲ್ಲಿ ವಾಪಾಸಾದರು.

ಸೋಮವಾರ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ತೊಗರ್ಸಿ ಹಿರೇಮಠದ ಶ್ರೀಗಳು, ಕಡೇನಂದಿಹಳ್ಳಿ ಶ್ರೀಗಳ ಸಹಿತ ನೂರಾರು ಕಾರ್ಯಕರ್ತರು ವಿವಿಧ ಸಮಾಜದ ಮುಖಂಡರನ್ನು ಭೇಟಿಯಾಗಿ, ಮಕರ ಸಂಕ್ರಾಂತಿಯ ಶುಭ ಹಾರೈಸಿದರು. ಪ್ರತಿಯೊಬ್ಬರಿಗೂ ಹಬ್ಬದ ವಿಶೇಷ ಎಳ್ಳು-ಬೆಲ್ಲ ವಿತರಿಸಿದ ಯಡಿಯೂರಪ್ಪ ಅವರು ಸಂಪೂರ್ಣ ಸಮಯವನ್ನು ಸಂಸದ ರಾಘವೇಂದ್ರ, ಮುಖಂಡರು, ಕಾರ್ಯಕರ್ತರ ಜತೆ ಕಳೆದರು.

ಈ ಸಂದರ್ಭದಲ್ಲಿ ಸಾರ್ವಜನಿಕರು, ಪಾದಚಾರಿಗಳು, ಮಹಿಳೆಯರು ಹಾಗೂ ಮಕ್ಕಳು ಯಡಿಯೂರಪ್ಪ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ನೆಚ್ಚಿನ ನಾಯಕರ ಜತೆಗೆ ಫೋಟೋಗೆ ಪೋಸು ನೀಡಿ ಸಂಭ್ರಮಿಸಿದರು. ಕೆಲವರು ಎಳ್ಳು- ಬೆಲ್ಲವನ್ನು ಯಡಿಯೂರಪ್ಪನವರ ಸಹಿತ ನೆರೆದವರಿಗೆ ವಿತರಿಸಿ ಹಬ್ಬ ಆಚರಿಸಿದರು. ರಸ್ತೆಯಲ್ಲಿ ತೆರಳುತ್ತಿದ್ದವರನ್ನು ಕರೆದು ಮಾತನಾಡಿಸಿದ ಯಡಿಯೂರಪ್ಪನವರ ಆತ್ಮೀಯತೆಗೆ ಸ್ಥಳೀಯರು ಫಿದಾ ಆಗಿಹೋದರು.

ಈ ಸಂದರ್ಭ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪ್ರವೀಣ ಶೆಟ್ಟಿ, ಅರವಿಂದ ಗಂಗೊಳ್ಳಿ, ರೂಪರಾಜು, ವಿದ್ಯಾಶಂಕರ, ವಿಜಯ ಪಾಟೀಲ್, ಶಿವಾನಂದಪ್ಪ, ರಾಜಶೇಖರ ಗಿರ್ಜಿ ಮತ್ತಿತರರು ಹಾಜರಿದ್ದರು.

- - - -15ಕೆಎಸ್.ಕೆಪಿ2:

ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಸಂಜೆ ರಥಬೀದಿಯಲ್ಲಿರುವ ಆಪ್ತ, ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ರಾಮಣ್ಣನವರ ಅಂಗಡಿ ಜಗಲಿಯಲ್ಲಿ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Share this article