ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಯಾವುದಾದರೂ ಒಂದು ಗ್ರಾಮವನ್ನು ಸರಾಯಿ ಮುಕ್ತ ಮಾಡಿದರೇ ಅದು ಮುಂದೆ ಹಲವು ಗ್ರಾಮಗಳಿಗೆ ಪ್ರೇರಣೆಯಾಗುತ್ತದೆ. ಅಬಕಾರಿ ಇಲಾಖೆ ಅಧಿಕಾರಿಗಳು ಆ ಕೆಲಸ ಮಾಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಸ್ಥಳೀಯ ಧರ್ಮಸ್ಥಳ ಸೇವಾ ಸಂಸ್ಥೆ ಮತ್ತು ಅಮೃತಾನಂದ ಸ್ವಾಮೀಜಿ ಸಹಕಾರ, ಮಾರ್ಗದರ್ಶನದಿಂದ ತಾಲೂಕಿನ ಯಾವುದಾದರೂ ಒಂದು ಗ್ರಾಮವನ್ನು ಗುರುತಿಸಿ ಅ.2 ರಿಂದ ಸಾರಾಯಿ ಮುಕ್ತ ಗ್ರಾಮ ಮಾಡಲು ಕಾರ್ಯ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.ತಾಲೂಕಿನಲ್ಲಿ 71,876 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಹಣ ಪಡೆಯುತ್ತಿದ್ದು, ಒಟ್ಟು ₹14 ಕೋಟಿ ವಿತರಣೆಯಾಗುತ್ತಿದೆ. ಈವರೆಗೆ 11 ತಿಂಗಳಲ್ಲಿ ₹154 ಕೋಟಿ ವಿತರಣೆಯಾಗಿದೆ ಎಂದರು.ಒಟ್ಟು 41 ಸಾವಿರ ಮನೆಗಳಿಗೆ ಗೃಹಜ್ಯೋತಿ ಯೋಜನೆಯಡಿ 39 ಸಾವಿರ ಮನೆಗಳಿಗೆ ಒಟ್ಟು ₹06 ಕೋಟಿ ಮೌಲ್ಯದ ವಿದ್ಯುತ್ ಉಚಿತ ಮತ್ತು 61 ಸಾವಿರ ಜನರಿಗೆ ಅಕ್ಕಿ ವಿತರಣೆಯ ಹಣ ₹170 ರಂತೆ ₹22 ಕೋಟಿ ಹಣ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ಜೂನ್ ತಿಂಗಳಲ್ಲಿ ವಾಡಿಕೆಯಂತೆ 102 ಎಂಎಂ ಮಳೆ ಬರಬೇಕಾಗಿತ್ತು. ಆದರೆ, 181 ಎಂಎಂ ಬಂದಿದೆ. ಜುಲೈ ತಿಂಗಳಲ್ಲಿ ವಾಡಿಕೆಯಂತೆ 97 ಎಂಎಂ ಮಳೆ ಬರಬೇಕಾಗಿದ್ದು, 94 ಎಂಎಂ ಮಳೆ ಬಂದಿದೆ. ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ 101 ಎಂಎಂ ಮಳೆ ಬರಬೇಕಾಗಿತ್ತು, 191 ಎಂಎಂ ಮಳೆ ಬಂದಿದೆ. ಈ ಬಾರಿ ವಾಡಿಕೆಯಂತೆ ಹೆಚ್ಚಿಗೆ ಮಳೆಯಾಗಿದೆ ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ ಮಾತನಾಡಿ, 31 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 105 ರೈತರಿಗೆ ಪರಿಹಾರ ಬಂದಿದೆ. ಬರಗಾಲದಿಂದ 105 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಹಣ ಬಿಡುಗಡೆಯಾಗಿದೆ ಎಂದರು.ಪಶು ಇಲಾಖೆಯ ಮುಖ್ಯ ವೈದ್ಯಾಧಿಕಾರಿ ರಾಜಕುಮಾರ ಅಡಕಿ ಮಾತನಾಡಿ, ಸಿಡಿಲು ಬಡಿದು ಸಾವು ಸಂಭವಿಸಿದ 14 ಜಾನುವಾರುಗಳಿಗೆ ಹಾಗೂ ಇತರೆ ಕಾರಣಗಳಿಂದ ಮರಣ ಹೊಂದಿದ 90 ಜಾನುವಾರುಗಳಿಗೆ ಪರಿಹಾರ ಹಣ ನೀಡಲಾಗಿದೆ. ರೈತರು 1912ಕ್ಕೆ ಕರೆ ಮಾಡಿದರೆ ರೈತರ ಜಮೀನುಗಳಿಗೆ ಆ್ಯಂಬುಲೆನ್ಸ್ ಬಂದು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.ಇಂಡಿ ತಾಲೂಕು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವುದರಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಲು ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಒದಗಿಸಿಕೊಡಬೇಕು ಎಂದು ಶಾಸಕರು ಘಟಕ ವ್ಯವಸ್ಥಾಪಕರಿಗೆ ಸೂಚಿಸಿದರು. ತಾಲೂಕಿನಿಂದ ಹಲವು ಜನರು ಸೋಲಾಪೂರಕ್ಕೆ ಆಸ್ಪತ್ರೆಗೆ ಹೋಗುತ್ತಾರೆ. ಹೀಗಾಗಿ ಬೆಳಗಾವಿ ಜಿಲ್ಲೆ ಅನೇಕ ಕಡೆ ಉಚಿತ ಬಸ್ ವ್ಯವಸ್ಥೆ ನೀಡಿದ್ದಾರೆ. ಹೀಗಾಗಿ ನಮ್ಮ ತಾಲೂಕಿನವರಿಗೂ ಸರ್ಕಾರಿ ಸೌಲಭ್ಯ ಕೊಡಲು ಸೂಚಿಸಿದರು. ಪಟ್ಟಣದ 10 ಕಿಮೀ ವರೆಗೆ ನಗರ ಸಾರಿಗೆ ವ್ಯವಸ್ಥೆ ಮಾಡಬೇಕು. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.ನಗರದ ಒಳಚರಂಡಿ,ಚರಂಡಿ ನೀರು ಬಸ್ ನಿಲ್ದಾಣದಲ್ಲಿ ಬರುತ್ತದೆ. ಅದನ್ನು ಸರಿಪಡಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕೆಡಿಪಿಗೆ ನೂತನವಾಗಿ ಆಯ್ಕೆಯಾದ ನಾಮನಿರ್ದೇಶಕ ಸದಸ್ಯರಾದ ಬಿ.ಕೆ.ಪಾಟೀಲ, ಗುರನಗೌಡ ಪಾಟೀಲ, ಕೆಂಪೆಗೌಡ ಪರಗೊಂಡ, ಕರಜಗಿ ಅವರನ್ನು ಸನ್ಮಾನಿಸಲಾಯಿತು.ಎಸಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ಡಿವೈಎಸ್ಪಿ ಜಗದೀಶ ಎಚ್.ಎಸ್, ತಾಪಂ ಇಒ ಬಾಬು ರಾಠೋಡ, ಭೀಮು ಕವಲಗಿ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಮಲ್ಲನಗೌಡ ಬಿರಾದಾರ, ಅಧಿಕಾರಿಗಳಾದ ಆರ್.ಎಸ್.ರುದ್ರವಾಡಿ, ಮಹಾಂತೇಶ ಹಂಗರಗಿ, ಮಹಾದೇವಪ್ಪ ಏವೂರ, ಅರಣ್ಯ ಇಲಾಖೆಯ ಎಸ್.ಜಿ.ಸಂಗಾಲಕ, ಮಂಜುನಾಥ ಧುಳೆ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.