ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ
ಶಿಕ್ಷಕರು 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಯೋಜನೆ ರೂಪಿಸಿ ಜಾರಿಗೆ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.
ಪಟ್ಟಣದ ಜಿಪಿಜಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ತಾಲೂಕಿನ ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪಠ್ಯಕ್ರಮವನ್ನು ಇಲಾಖೆಯ ನಿರ್ದೇಶನದಂತೆ ಡಿಸೆಂಬರ್ ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಬೇಕೆಂದು ಹೇಳಿದರು.ಪ್ರಸಕ್ತ ಸಾಲಿನ ರೂಪಣಾತ್ಮಕ ಸಂಕಲನಾತ್ಮಕ ಪರೀಕ್ಷೆಗಳ ಅಂಕಗಳನ್ನು ಎಸ್ಎಟಿಎಸ್ ತಂತ್ರಾಂಶದಲ್ಲಿ ಇಂಡೀಕರಿಸಬೇಕು. ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ಸಮರ್ಪಕ ನಿರ್ವಹಣೆ ಮಾಡಬೇಕೆಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಮಾತನಾಡಿ, ಎಫ್ಎಲ್ಎನ್ ಶೈಕ್ಷಣಿಕ ಚಟುವಟಿಕೆ, ಸಚೇತನ ಕಾರ್ಯಕ್ರಮ, ಮಕ್ಕಳ ರಕ್ಷಣಾ ನೀತಿ, ಮಕ್ಕಳ ಸಹಾಯವಾಣಿ, ತೆರೆದ ಮನೆ ವಿಷಯಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ದೈಹಿಕ ಪರಿವೀಕ್ಷಕ ರಫಿ ಅಹಮದ್ ಖವಾಸ್ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡರು.
ನಿವೃತ್ತ ಮುಖ್ಯ ಗುರುಗಳಾದ ಬಾಗಾರ ನಿಂಗಪ್ಪ, ಲಕ್ಷ್ಮಣ್ ನಾಯ್ಕ, ಕನ್ನಡ ಜಾಗೃತಿ ಜಿಲ್ಲಾ ಸಮಿತಿಗೆ ಆಯ್ಕೆಯಾದ ಸುರೇಶ ಅಂಗಡಿ ಅವರಿಗೆ ಸನ್ಮಾನಿಸಲಾಯಿತು.