ಕುಮಟಾ: ನಮ್ಮ ಹಬ್ಬಗಳ ಮೂಲ ಸ್ವರೂಪ ಕೆಡಿಸುವ ಕೆಲಸವನ್ನು ನಮ್ಮದೇ ಯುವ ಸಮುದಾಯ ಮಾಡುತ್ತಿದೆ. ನಾವೇ ನಮ್ಮ ಸಂಸ್ಕೃತಿಯನ್ನು, ಹಬ್ಬವನ್ನು ಹಾಳು ಮಾಡಿಕೊಳ್ಳಲು ನಿಂತರೆ ನಮ್ಮನ್ನು ಉದ್ಧರಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿರಿಯರು ಹಾಕಿಕೊಟ್ಟ ಪ್ರಜ್ಞಾಪೂರ್ವಕ ಹೆಜ್ಜೆಗಳನ್ನು ನಾವು ತಪ್ಪಬಾರದು ಎಂದು ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮೀಜಿ ನುಡಿದರು.
ನಮ್ಮ ಶರೀರದೊಳಗಿನ ಭಗವಂತ ಹಚ್ಚಿರುವ ಆತ್ಮಜ್ಯೋತಿಯು ಕಾಲದ ಅನುಸರಣೆಯಲ್ಲಿ ಬದುಕಿನಲ್ಲಿ ಕತ್ತಲು ಮತ್ತು ಬೆಳಕಿನ ಭಾವವನ್ನು ಬಿತ್ತುತ್ತಾ ನಿರಂತರ ಪ್ರವಹಿಸುತ್ತದೆ. ಲೋಕಹಿತ, ಧರ್ಮ ಮಾರ್ಗ ನಡೆಯುವವರಿಗೆ ಕಾಲಕ್ಕೆ ತಕ್ಕ ಪ್ರತಿಫಲ ಶತಃಸ್ಸಿದ್ಧ. ಕರ್ಮದ ಫಲ ಉಂಡೇ ತೀರಬೇಕು. ಹೀಗಾಗಿ ಬದುಕಿನಲ್ಲಿ ಒಳ್ಳೆಯದನ್ನು ಮಾಡಿ ಹೋದರೆ ನಮ್ಮ ಜೀವಕಾಲಕ್ಕೆ ಸಾರ್ಥಕತೆ ಸಿಗುತ್ತದೆ. ಕಾಲಸಾಕ್ಷಿಯಾಗಿ ದೇಶ ಸಾಕ್ಷಿಯಾಗಿ ಧರ್ಮಮಾರ್ಗದಲ್ಲಿ ನಡೆಯಬೇಕು. ಸಮಾಜಗಳು ಭಾರತ ನಿರ್ಮಾಣದ ಬಿಂದುಗಳು. ಒಗ್ಗಟ್ಟಿನಿಂದಿರಿ. ಯುಗಾದಿ ಉತ್ಸವ ಕಾರ್ಯಕ್ರಮ ಹಲವಾರು ಆದರ್ಶಗಳಿಂದಾಗಿ ಸರ್ವಾಂಗ ಸುಂದರವಾಗಿದೆ ಎಂದರು.
ಜೈನಮುನಿಗಳಾದ ಎಲಾಚಾರ್ಯ ಪ್ರಸಂಗಸಾಗರ ಮಹಾರಾಜ ಆಶೀರ್ವದಿಸಿ, ಮಕ್ಕಳು ತಂದೆ ತಾಯಿಗೆ ಮೋಸ ಮಾಡಬಾರದು, ವಿಧೇಯರಾಗಿರಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿ, ಸ್ವತಃ ಮಾಡಿ ತೋರಿಸಿದರೆ ಮಕ್ಕಳು ಕಲಿಯುತ್ತಾರೆ. ಮನೆಯ ಮುಖ್ಯಸ್ಥ, ತಂದೆ ತಾಯಿ, ಸಮಾಜದ ಮುಖ್ಯಸ್ಥ, ಧಾರ್ಮಿಕ ಮುಖ್ಯಸ್ಥ ಗುರು, ಸರಿಯಾಗಿದ್ದರೆ ದೇಶ, ಸಮಾಜ, ಪರಿವಾರ ಎಲ್ಲವೂ ಸರಿಯಾಗಿರುತ್ತದೆ. ಯುವಜನತೆ ದಾರಿ ತಪ್ಪಬಾರದು. ಮಠಗಳಲ್ಲಿ ಶಾಶ್ವತ ಸಂಸ್ಕಾರ ಸಿಗುತ್ತದೆ ಎಂದರು.ಸಂಚಾಲಕ ಮುರಲೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿ, ನಮ್ಮ ಯುವಜನತೆ ಸಾವಿರಾರು ವರ್ಷಗಳ ಆಕ್ರಮಣಕಾರರು ಬೆಳೆಸಿದ ಮಾನಸಿಕತೆಯನ್ನು ಮುಂದೆ ಒಂದಿಲ್ಲೊಂದು ದಿನ ಕಳೆದುಕೊಂಡು ನಮ್ಮ ಸಂಸ್ಕೃತಿ-ಅಸ್ಮಿತೆಯಯೊಂದಿಗೆ ವಿಜೃಂಭಿಸುವಂತಾಗಬೇಕು ಎಂಬುದೇ ನಮ್ಮ ಧ್ಯೇಯವಾಗಿದೆ. ಜಾತಿ, ಮತ, ಪಂಥ ಭೇದವಿಲ್ಲದೇ ಒಗ್ಗಟ್ಟಾಗಿದ್ದರೆ ಮಾತ್ರ ನಮ್ಮತನ ಉಳಿಯಲು ಸಾಧ್ಯ ಎಂದರು.
ವಿಶೇಷ ಸಾಧಕರಾದ ನಾಗರಾಜ ನಾಯ್ಕ, ಸಚಿನ್ ಭಟ್, ರಂಗರಾಜ ಪಿಳ್ಳೆ, ಪ್ರಕಾಶ ಪಟಗಾರ, ಮಂಜುನಾಥ ನಾಯ್ಕ, ರಾಜೀವ ಅವರಿಗೆ ಯುಗಾದಿ ಸಿಂಚನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉತ್ಸವ ಪ್ರಯುಕ್ತ ನಡೆಸಿದ ಭಜನಾ ಸ್ಪರ್ಧೆಯ ಸಾಂಪ್ರದಾಯಿಕ ಶೈಲಿ ವಿಭಾಗದಲ್ಲಿ ಮಹಾವಿಷ್ಣು ಭಜನಾ ಬಳಗ ಬಳ್ಕೂರು ಪ್ರಥಮ ಸ್ಥಾನ, ಜಟಕೇಶ್ವರ ಭಜನಾ ಮಂಡಳಿ ಕಡ್ಲೆಕೊಪ್ಪ ದ್ವಿತೀಯ ಸ್ಥಾನ ಹಾಗೂ ಶಾಂತಿಕಾ ಪರಮೇಶ್ವರಿ ಭಜನಾ ಸಂಘ ಕುಮಟಾ ತೃತೀಯ ಸ್ಥಾನ ಪಡೆದರು.ಶಾಸ್ತ್ರೀಯ ಭಜನೆ ವಿಭಾಗದಲ್ಲಿ ಶಾಂತಿಕಾ ಪರಮೇಶ್ವರಿ ಭಜನಾ ಸಂಘ ಮತ್ತು ಸ್ವರಧಾರಾ ಕಲಾತಂಡ ಪ್ರಥಮ, ವಸುಧಾ ಶಾಸ್ತ್ರಿ ಸಂಗಡಿಗರು ದ್ವಿತೀಯ ಹಾಗೂ ಗೌರಿ ಮಹಿಳಾ ಸಮಾಜ ಶಿರಸಿ ತೃತೀಯ ಸ್ಥಾನ ಪಡೆದರು. ವಿಜೇತ ತಂಡಕ್ಕೆ ಬಹುಮಾನ ನೀಡಲಾಯಿತು. ಮಾತಾ-ಪಿತೃ ಪೂಜನ, ಬೇವು ಬೆಲ್ಲ ವಿತರಣೆ ನಡೆಯಿತು.
ವೇ. ವಿಠ್ಠಲ ಭಟ್ ಅವರಿಂದ ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ವಿದ್ವಾನ್ ಡಾ. ಗೋಪಾಲಕೃಷ್ಣ ಹೆಗಡೆ ಪಂಚಾಂಗ ಶ್ರವಣ ನಡೆಸಿಕೊಟ್ಟರು. ಡಾ. ಸುರೇಶ ಹೆಗಡೆ ಸ್ವಾಗತಿಸಿದರು. ಆನಂದ ನಾಯಕ ವಂದಿಸಿದರು. ಈಶ್ವರ ಭಟ್ ನಿರ್ವಹಿಸಿದರು.ಯುಗಾದಿ ಉತ್ಸವ ಪ್ರಯುಕ್ತ ಪಟ್ಟಣದ ದೇವರಹಕ್ಕಲ ಗ್ರಾಮದೇವತೆ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಯಲ್ಲಿ ಹಲವಾರು ಬಗೆಯ ಸ್ತಬ್ಧಚಿತ್ರಗಳು, ನೃತ್ಯ-ವಾದ್ಯ ತಂಡಗಳು ಗಮನ ಸೆಳೆದವು. ಮೆರವಣಿಗೆಯುದ್ದಕ್ಕೂ ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಜಯಕಾರ ಹಾಕಿದರು. ಮಾರ್ಗಮಧ್ಯದಲ್ಲಿ ಮುಸ್ಲಿಂ ಸಮಾಜದಿಂದ ಲಘುಪಾನೀಯ, ಹಣ್ಣು ವಿತರಿಸಲಾಯಿತು.