ಹಾವೇರಿ: ಡಾ. ಬಿ.ಆರ್. ಅಂಬೇಡ್ಕರ ಅವರ ಸಮಾನತೆಯ ಕನಸು ನನಸು ಮಾಡಬೇಕು ಎಂದು ಎಂದು ಚಿಂತಕ, ಲೇಖಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ ಜಯಂತಿ ಅಂಗವಾಗಿ ಯುವ ಬ್ರಿಗೇಡ್ ವತಿಯಿಂದ ನಗರದ ಕೆಎಲ್‌ಇ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬೆಳಕು ಹೊಳಪು ಡಾ. ಬಿ.ಆರ್. ಅಂಬೇಡ್ಕರ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದರು.ಡಾ. ಅಂಬೇಡ್ಕರ ಅವರ ಹೋರಾಟದ ಹಾದಿ ಸಾಮಾನ್ಯವಾದುದಲ್ಲ. ಅಂಬೇಡ್ಕರ ಅವರು ಬಾಲ್ಯದಲ್ಲಿ ಸಾರ್ವಜನಿಕ ನಲ್ಲಿಯ ನೀರು ಕುಡಿಯಲು ಹೋದರೆ ಜನ ಹೊಡೆದು ಓಡಿಸುತ್ತಿದ್ದರು. ಒಂದು ಗುರಿಗೋಸ್ಕರ ಅವರು ಅಕ್ಕಪಕ್ಕದ ಏನನ್ನೂ ನೋಡದೇ, ಯಾವ ಆಮಿಷಕ್ಕೂ ಜಗ್ಗದೇ ಮುನ್ನುಗ್ಗುವ ಛಾತಿಯನ್ನು ಬೆಳೆಸಿಕೊಂಡಿದ್ದರು. ಅದರ ಪರಿಣಾಮವೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.
ಬಾಬಾಸಾಹೇಬರು ಜನರಿಗೆ ಎಷ್ಟು ಅರ್ಥವಾಗಿದ್ದಾರೋ ಅದಕ್ಕಿಂತ ಹೆಚ್ಚಾಗಿ ಅರ್ಥವಾಗದೇ ಉಳಿದಿದ್ದಾರೆ. ಅದರ ಪರಿಣಾಮಗಳನ್ನು ಇಂದು ನಾವು ನೋಡುತ್ತಿದ್ದೇವೆ. ಬಾಬಾಸಾಹೇಬ ಅವರ ಜೀವನ ಚರಿತ್ರೆಯ ಪುಸ್ತಕ ಓದಿದರೆ ಸಾಕು, ಅದಕ್ಕಿಂತ ಒಳ್ಳೆಯ ವ್ಯಕ್ತಿತ್ವ ವಿಕಸನ ಮತ್ತೊಂದಿಲ್ಲ ಎಂದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಜನಹಿತಕ್ಕಾಗಿ ಏನಾದರೂ ಮಾಡಬೇಕು ಎಂದು ಹಠ ತೊಟ್ಟ ಹಠಯೋಗಿ ಡಾ. ಬಿ.ಆರ್. ಅಂಬೇಡ್ಕರ. ಎಲ್ಲರಿಗೂ ಸಮಾನತೆ ಸಿಗಬೇಕು ಎಂಬ ಛಲ ಅವರನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಯಿತು. ಅವರು ಮನಸ್ಸು ಮಾಡಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಅವರು ಜನಹಿತಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಬಹಳಷ್ಟು ಜನ ನಾವು ಇನ್ನೂ ಸಂವಿಧಾನವನ್ನೇ ಅರಿತುಕೊಂಡಿಲ್ಲ. ಇನ್ನು ಅಂಬೇಡ್ಕರ ಅವರನ್ನು ಅರಿತುಕೊಳ್ಳುವುದು ದೂರದ ಮಾತಾಗಿದೆ ಎಂದರು.
ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ ಅವರು ಪ್ರಜಾಪ್ರಭುತ್ವ ಯಶಸ್ವಿಗೊಳಿಸಲು ಹೋರಾಡಿ ಅದರಲ್ಲಿ ಯಶಸ್ವಿಯಾದರು. ಬದುಕಿನ ಆಧಾರದ ಮೇಲೆ ಪ್ರಜಾಪ್ರಭುತ್ವ ಕಟ್ಟಿದರು. ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯುತ್ತಮ ಅಧ್ಯಯನ ಮಾಡಿದ್ದರು. ಅವರ ಮೌಲ್ಯಾಧಾರಿತ ಚಿಂತನೆಗಳು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದರು.ಸಂವಿಧಾನ ತಜ್ಞ ಸುಧಾಕರ ಹೊಸಳ್ಳಿ, ಚಿಂತಕರಾದ ಫಟಾಫಟ್ ಶ್ರೀನಿವಾಸ, ರೋಹಿತ ಚಕ್ರತೀರ್ಥ, ಅಂಕಣಕಾರ ಪ್ರವೀಣಕುಮಾರ ಮಾವಿನಕಾಡು, ಲೇಖಕ ವಿಕಾಸ ಪುತ್ತೂರು ವಿವಿಧ ಗೋಷ್ಠಿಗಳಲ್ಲಿ ಭಾಗಿಯಾಗಿ ವಿಷಯ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಎಲ್. ಬಾಲೆಹೊಸೂರು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಏ. ಕೊಲ್ಲಾಪುರೆ, ಪ್ರಜ್ಞಾಪ್ರವಾಹ ಅಖಿಲ ಭಾರತ ಸಹಸಂಯೋಜಕ ರಘುನಂದನ, ಕೆ.ಎನ್. ಪಾಟೀಲ, ನಿರಂಜನ ಪೂಜಾರ, ಡಾ. ಶಿವಾನಂದ ಕೆಂಭಾವಿ ಉಪಸ್ಥಿತರಿದ್ದರು.