-ಗ್ರೀನ್ ಸಿಟಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಕ್ರಿಯ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಯಾದಗಿರಿಬಿಜೆಪಿ ಪಕ್ಷದಲ್ಲಿರುವ ಅತ್ಯಂತ ಕ್ರಿಯಾಶೀಲ-ಸಕ್ರಿಯ ಸದಸ್ಯರನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸುವ ಕಾರ್ಯ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ತಮ್ಮ ಕಾರ್ಯಕ್ಷಮತೆಯಿಂದ ಸಕ್ರಿಯ ಸದಸ್ಯತ್ವ ಪಡೆದುಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.
ನಗರದ ಗ್ರೀನ್ ಸಿಟಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಕ್ರಿಯ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿ 9 ಕೋಟಿಗಿಂತ ಅಧಿಕ ಜನ ಸದಸ್ಯತ್ವ ಪಡೆದಿದ್ದು, ಅ.31ರವರೆಗೆ ಜಾಲ್ತಿಯಲ್ಲಿದೆ ಎಂದರು.ಮೊ:8800002024 ಗೆ ಮಿಸ್ ಕಾಲ್ ಮಾಡುವುದರೊಂದಿಗೆ ಬಿಜೆಪಿ ಸದಸ್ಯರಾಗಬಹುದು. ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವವಾಗಿದ್ದು ಹಾಗೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಪಕ್ಷದ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರಲ್ಲಿ ಬೆಳೆಸಿ, ರಾಷ್ಟ್ರೀಯ ಚಿಂತನೆಗಳಿಗೆ ಕಾರ್ಯಕರ್ತನ್ನು ಸಿದ್ಧರಾಗಿಸುವ ಗುರಿ ಬಿಜೆಪಿ ಹೊಂದಿದೆ ಎಂದರು.
ಸಕ್ರಿಯ ಸದಸ್ಯರಾಗುವುದರಿಂದ ಪಕ್ಷದ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳಾಗಲು ಅರ್ಹತೆ ಹೊಂದಲಾಗುವುದು. ಪಕ್ಷಕ್ಕೋಸ್ಕರ ಹಗಲಿರುಳು ದುಡಿಯುವ ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ 3ನೇ ಬಾರಿ ಅಧಿಕಾರಕ್ಕೆ ಬಂದಿದೆ. ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರು ಪಕ್ಷದಲ್ಲಿ ಸಲ್ಲಿಸಿದ ಸೇವೆ ಸಮಾಜಮುಖಿ ಕಾರ್ಯಗಳು ಹಾಗೂ ಜನಪರವಾದ ಸೇವಾಕಾಂಕ್ಷಿಗಳ ಜೊತೆಗೆ ತಮ್ಮ ಕೌಶಲ್ಯ, ಆಸಕ್ತಿಯನ್ನು ಕಲೆ ಹಾಕಲಾಗುತ್ತಿದೆ. ದೇಶದಲ್ಲಿ ಪ್ರಥಮ ಸಕ್ರಿಯ ಸದಸ್ಯತ್ವವನ್ನು ನೆಚ್ಚಿನ ಪ್ರಧಾನಿ ಮೋದಿ ಅವರು ಪಡೆದುಕೊಂಡಿರುವುದು ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತಂದಿದೆ. ಸಕ್ರಿಯ ಸದಸ್ಯರಾಗುವ ಪಕ್ಷದ ಕಾರ್ಯಕರ್ತರು ಪಾಥಮಿಕ ಸದಸ್ಯರ ಸಂಖ್ಯೆಯನ್ನು ತಮ್ಮ ಬೂತ್ ಮತ್ತು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾಡಬೇಕೆಂದರು.ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಬೇಕಿದೆ. ಪಕ್ಷದ ಪದಾಧಿಕಾರಿಗಳು, ಪ್ರತಿಯೊಬ್ಬಕಾರ್ಯಕರ್ತರು 100 ಸದಸ್ಯರನ್ನು ಮಾಡಿದರೆ ಅವರು ಪಕ್ಷದ ಸಕ್ರಿಯ ಸದಸ್ಯರಾಗುತ್ತಾರೆ ಎಂದರು.
ಯುವ ಮುಖಂಡ ಮಹೇಶ್ ರೆಡ್ಡಿ ಮುದ್ನಾಳ ಮಾತನಾಡಿ, ಗಣೇಶ ಚತುರ್ಥಿ, ದಸರಾ ಹಬ್ಬದ ಹಿನ್ನೆಲೆ ಅಭಿಯಾನ ವಿಳಂಬವಾಗಿದೆ. ಆದ್ದರಿಂದ ಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸದಸ್ಯತ್ವ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಮಾಜಿ ಜಿಲ್ಲಾ ಅಧ್ಯಕ್ಷ ಡಾ. ಶರಣಭೂಪಾಲ ರೆಡ್ಡಿ ಮತ್ತು ಜಿಲ್ಲಾ ಸಹಸಂಚಾಲ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಮಾತನಾಡಿದರು.ನಾಗರತ್ನ ಕುಪ್ಪಿ, ಸಿದ್ರಾಮರೆಡ್ಡಿಗೌಡ ಬಲ್ಕಲ್ ಸೇರಿದಂತೆ ಇತರರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಹಣಮಂತ ಇಟಗಿ ವಂದಿಸಿದರು.
----20ವೈಡಿಆರ್9: ಯಾದಗಿರಿ ನಗರದ ಗ್ರೀನ್ ಸಿಟಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಕ್ರಿಯ ಬಿಜೆಪಿ ಸದಸ್ಯತ್ವ ಅಭಿಯಾನದ ಕಾರ್ಯಾಗಾರ ಜರುಗಿತು.