ಕಾರವಾರ: ಯಾವುದೇ ಸಮಯಕ್ಕೆ ಯಾವುದೇ ಚುನಾವಣೆ ಬಂದರೂ ನಾವು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕಾರ್ಯಕರ್ತರಲ್ಲಿ ವಿನಂತಿಸಿದರು.ನಗರದ ಪಕ್ಷದ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರವಾರ ಗ್ರಾಮೀಣ ಮಂಡಲ ಹಾಗೂ ನಗರ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಯೋಜನೆ ಬಂದಿಲ್ಲ. ಕೇಂದ್ರದಿಂದ ಹಣ ಬಂದರೆ ತಾವೇ ಕೊಟ್ಟಿದ್ದು ಎಂಬಂತೆ ಕಾಂಗ್ರೆಸ್ ನವರು ಪೋಸ್ ಕೊಡುತ್ತಾರೆ. ಕೊಡದೇ ಇರುವುದೆಲ್ಲ ಕೇಂದ್ರದ್ದು ಎಂದು ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಇಂದು ಕಾರ್ಯಕರ್ತರಿಂದ ಪಕ್ಷಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಇದು ಸಂತಸದ ಸಂಗತಿ ಎಂದರು.ಗ್ರಾಮೀಣ ಮಂಡಲದ ಕಾರ್ಯಕಾರಿಣಿಯಲ್ಲಿ ಮಂಡಲದ ಅಧ್ಯಕ್ಷ ಸುಭಾಷ ಗುನಗಿ ಪ್ರಾರ್ಥನಾ ಗೀತೆಯೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕರ್ತರ ಬೆನ್ನುತಟ್ಟಿದರು. ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಕೇಂದ್ರ ಸರ್ಕಾರದ ಸಾಧನೆಗಳ ವರದಿ ಮಂಡಿಸಿದರು. ನಾರಾಯಣ ಗುನಗ ಅನುಮೋದಿಸಿದರು.
ಪ್ರಧಾನ ಕಾರ್ಯದರ್ಶಿ ವಿಕೇಶ್ ಬಾಂದೆಕರ್ ವರದಿ ಮಂಡಿಸಿದರು. ಚಂದಾ ನಾಯ್ಕ, ಮಹಿಳಾ ಮೋರ್ಚಾ ಕಾರ್ಯಕ್ರಮದ ಕುರಿತು ವಿವರಿಸಿದರು. ರಾಜ್ಯ ಸರ್ಕಾರದ ವೈಫಲ್ಯದ ವರದಿಯನ್ನು ರಾಜೇಶ್ ಗಾಂವ್ಕಾರ್ ಮಂಡಿಸಿದರು. ವಿಜೇಶ್ ಮಡಿವಾಳ ಅನುಮೋದಿಸಿದರು.ರಾಜ್ಯ ಪ್ರಕೋಷ್ಠದ ಸದಸ್ಯ ಸುನಿಲ್ ಸೋನಿ, ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ ಇದ್ದರು.
ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ಸ್ವಾಗತಿಸಿದರು. ಸೂರಜ್ ದೇಸಾಯಿ ವಂದಿಸಿದರು.ನಗರ ಮಂಡಲದ ಕಾರ್ಯಕಾರಿಣಿಯಲ್ಲಿ ಮಂಡಲದ ಅಧ್ಯಕ್ಷ ನಾಗೇಶ ಕುರ್ಡೇಕರ ಮಾತನಾಡಿ, ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು.
ಪ್ರಮುಖರಾದ ಮನೋಜ ಭಟ್, ನಯನಾ ನೀಲಾವರ, ಅಶೋಕ ಗೌಡ ವಿವಿಧ ಮೋರ್ಚಾದ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿದ್ದರು.