ಯೂರಿಯಾ ಅಭಾವ: ಬಿಜೆಪಿಯಿಂದ ಆಗಸ್ಟ್‌ 1ರಂದು 5 ವಿಧಾನಸಭಾ ಕ್ಷೇತ್ರದಲ್ಲಿ ಬಂದ್‌

KannadaprabhaNewsNetwork |  
Published : Jul 29, 2025, 01:03 AM IST
28ಕೆಪಿಎಲ್26 ಬಿಜೆಪಿ ಕಾರ್ಯಾಲಯದಲ್ಲಿ ಯೂರಿಯಾ ರಸಗೊಬ್ಬರ ಅಭಾವ ಕುರಿತು ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಅನ್ನ ಹಾಕುವ ರೈತನಿಗೆ ಮಣ್ಣು ತಿನ್ನಿಸುವ ಕೆಲಸ ಮಾಡಿದ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆ. ಇಷ್ಟಾದರೂ ರೈತರ ಯೂರಿಯಾ ರಸಗೊಬ್ಬರದ ಅಭಾವ ನೀಗಿಸುವಲ್ಲಿ ಸಾಧ್ಯವಾಗಿಲ್ಲ. ಈಗಲೂ ರೈತರು ಒಂದು ಚೀಲ ಯೂರಿಯಾ ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ.

ಕೊಪ್ಪಳ:

ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮಣ್ಣು ತಿನ್ನುವ ಪರಿಸ್ಥಿತಿ ಬಂದರೂ ರಾಜ್ಯ ಸರ್ಕಾರ ಸ್ಪಂದಿಸದೆ ಇರುವುದರಿಂದ ಆ. 1ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಂದ್‌ಗೆ ಕರೆ ನೀಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗೊಬ್ಬರ ಅಭಾವ ಕುರಿತು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನ್ನ ಹಾಕುವ ರೈತನಿಗೆ ಮಣ್ಣು ತಿನ್ನಿಸುವ ಕೆಲಸ ಮಾಡಿದ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗಿದೆ ಎಂದರು.

ಇಷ್ಟಾದರೂ ರೈತರ ಯೂರಿಯಾ ರಸಗೊಬ್ಬರದ ಅಭಾವ ನೀಗಿಸುವಲ್ಲಿ ಸಾಧ್ಯವಾಗಿಲ್ಲ. ಈಗಲೂ ರೈತರು ಒಂದು ಚೀಲ ಯೂರಿಯಾ ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಆ. 1ರಂದು ನಡೆಯುವ ಬಂದ್ ವೇಳೆ ಸಾರ್ವಜನಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.

ರೈತರಿಗೆ ಸಾಮಾನ್ಯ ಮಾರುಕಟ್ಟೆಯಲ್ಲಿ ಹಾಗೂ ಸಹಕಾರಿ ಒಡೆತನದ ಮಳಿಗೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವವಿದೆ. ದಿನಪೂರ್ತಿ ನಿಂತರೂ ಒಂದು ಚೀಲ ಸಿಗುತ್ತಿಲ್ಲ. ಆದರೆ, ಕಾಳಸಂತೆಯಲ್ಲಿ ಯೂರಿಯಾ ಅವ್ಯಾಹತವಾಗಿ ದೊರೆಯುತ್ತದೆ. ಇದು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಸರ್ಕಾರ ನಿಗದಿ ಮಾಡಿದ ದರಕ್ಕೆ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ಆದರೆ, ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ರಾತ್ರೋರಾತ್ರಿ ಮಾರಾಟ ಮಾಡುತ್ತಾರೆ. ಯೂರಿಯಾ ರಸಗೊಬ್ಬರ ಬೇಕೆಂದರೆ ಅದರೊಂದಿಗೆ ವಿವಿಧ ವಸ್ತುಗಳನ್ನು ಖರೀದಿಸುವಂತೆ ತಾಕೀತು ಮಾಡುತ್ತಿದ್ದಾರೆ. ಇದರಿಂದ ರೈತರು ರೋಸಿ ಹೋಗಿದ್ದಾರೆ. ಇದನ್ನು ಮನಗಂಡು ರೈತರ ಪರವಾಗಿ ಹೋರಾಟ ಮಾಡಿ, ರೈತರಿಗೆ ಗೊಬ್ಬರ ಕೊಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಇದಕ್ಕಾಗಿಯೇ ಬಿಜೆಪಿಯಿಂದ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಈ ವೇಳೆ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ, ಮುಖಂಡರಾದ ಡಾ. ಬಸವರಾಜ ಕ್ಯಾವಟರ್‌, ಮಹಾಂತೇಶ ಮೈನಳ್ಳಿ ಸೇರಿದಂತೆ ಅನೇಕರು ಇದ್ದರು.

ಗೊಬ್ಬರ ಪೂರೈಕೆ:ಬೆಟಗೇರಿ ಗ್ರಾಮಕ್ಕೆ ಯೂರಿಯಾ ಪೂರೈಕೆಯಾಗದೆ ಇರುವುದರಿಂದ ಸಹಕಾರಿ ಸಂಘದ ಕಚೇರಿಗೆ ಬೀಗ ಹಾಕಿ ರೈತರು ಪ್ರತಿಭಟನೆ ಮಾಡಿದ್ದರು. ಈ ಕುರಿತು ವರದಿಯಾಗುತ್ತಿದ್ದಂತೆ ಬೆಟಗೇರಿ ಗ್ರಾಮಕ್ಕೆ 240 ಚೀಲ ಯೂರಿಯ ರಸಗೊಬ್ಬರವನ್ನು ಪೂರೈಕೆ ಮಾಡಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ