ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯಾದ್ಯಂತ ಯೂರಿಯಾ ಗೊಬ್ಬರಕ್ಕಾಗಿ ರೈತರ ಪರದಾಟ ನಡೆಯುತ್ತಿದೆ. ಆದರೆ, ಹರಳು ರೂಪದ ಯೂರಿಯಾಗೆ ಪರ‍್ಯಾಯವಾಗಿ ದ್ರವರೂಪದ ನ್ಯಾನೋ ಯೂರಿಯಾ ಬಳಕೆಗೆ ನಿರೀಕ್ಷಿತ ಮಟ್ಟದಲ್ಲಿ ರೈತರು ಮುಂದಾಗುತ್ತಿಲ್ಲ. ಇದಕ್ಕೆ ಪ್ರಚಾರ, ಜನಜಾಗೃತಿ ಕೊರತೆ ಎದ್ದುಕಾಣುತ್ತಿದೆ.ಈ ವರ್ಷ ಮಳೆಗಾಲ ಬೇಗ ಶುರುವಾಗಿದ್ದರಿಂದ ಕೃಷಿ ಚಟುವಟಿಕೆಗಳೂ ಅಷ್ಟೇ ವೇಗ ಪಡೆದಿವೆ. ಬಿತ್ತನೆ ಮಾಡಿದ ಮೇಲೂ ಮಳೆಯ ಅಬ್ಬರತೆ ವಿಪರೀತ ಎನ್ನುವಷ್ಟು ಆಯಿತು. ಹೀಗಾಗಿ ಯೂರಿಯಾಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಯೂರಿಯಾ ಪೂರೈಕೆಯಾದರೂ ಸಾಕಾಗುತ್ತಿಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂದು ರೈತರು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತಿಲ್ಲ.
ನ್ಯಾನೋ ಯೂರಿಯಾ: ನ್ಯಾನೋ ತಂತ್ರಜ್ಞಾನ ಬಳಸಿ ಯೂರಿಯಾ ಗೊಬ್ಬರದ ತಯಾರಿಕೆಗೆ 2012ರಿಂದಲೇ ಸಂಶೋಧನೆ ನಡೆಯುತ್ತಿತ್ತು. 2021ರ ಆಗಸ್ಟ್‌ನಲ್ಲಿ ಇಫ್ಕೋ ಸಂಸ್ಥೆಯು ಮಾರುಕಟ್ಟೆಗೆ ಪರಿಚಯಿಸಿತು. 500 ಎಂಎಲ್ ಬಾಟಲ್‌ನಲ್ಲಿ ಇದು ದ್ರವ (ಲಿಕ್ವಿಡ್) ರೂಪದಲ್ಲಿ ದೊರೆಯುವಂತೆ ಮಾಡಿತು. ಒಂದು ಲೀಟರ್ ನೀರಿಗೆ 4 ಎಂಎಲ್ ನ್ಯಾನೋ ಯೂರಿಯಾ ಮಿಶ್ರಣ ಮಾಡಿದರೆ ಸಾಕಾಗುತ್ತದೆ. 500 ಎಂಎಲ್ ಬಾಟಲ್ ಬರೋಬ್ಬರಿ 9 ಕ್ಯಾನ್ ಆಗುತ್ತದೆ ಅಂದರೆ ಒಂದು ಎಕರೆಗೆ ಸಾಕಾಗುತ್ತದೆ.ವ್ಯತ್ಯಾಸವೇನು?: ಹರಳು ರೂಪದಲ್ಲಿನ ಸಾಂಪ್ರದಾಯಿಕ ಗೊಬ್ಬರವನ್ನು ಭೂಮಿಯಲ್ಲಿ ಸಿಂಪರಣೆ ಮಾಡಬೇಕು. ಶೇ. 30-40ರಷ್ಟು ಮಾತ್ರ ಬೆಳೆಗೆ ಲಭ್ಯವಾಗುತ್ತದೆ. ಉಳಿದ 60-70ರಷ್ಟು ಯೂರಿಯಾ ಬೆಳೆಗೆ ಸಿಗುವುದಿಲ್ಲ. ಭೂಮಿಯಲ್ಲಿ ಹಾಳಾಗಿಯೂ, ಗಾಳಿಯಲ್ಲೂ, ಮಳೆಯಲ್ಲೂ ಹೋಗುತ್ತದೆ. ಜತೆಗೆ ಭೂಮಿಯಲ್ಲಿ ಸೇರಿ ಬರಡನ್ನಾಗಿಸುತ್ತದೆ.
ಆದರೆ, ದ್ರವರೂಪದ ನ್ಯಾನೋ ಯೂರಿಯಾವನ್ನು ಯಂತ್ರದ ಮೂಲಕ ಎಲೆಗಳ ಮೇಲೆ ಸಿಂಪರಣೆ ಮಾಡಲಾಗುತ್ತದೆ. ಇದರಿಂದ ನೇರವಾಗಿ ಬೆಳೆಯ ಬೇರಿನ ವರೆಗೂ ಇಳಿಯುತ್ತದೆ. ನ್ಯಾನೋ ಯೂರಿಯಾ ಬಳಕೆಯಿಂದ ಶೇ. 8ರಷ್ಟು ಇಳುವರಿ ಹೆಚ್ಚಾಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.ಏಕೆ ಒಪ್ಪುತ್ತಿಲ್ಲ?: ಆದರೂ ರೈತರು ಮಾತ್ರ ಈವರೆಗೂ ಹರಳು ರೂಪದ ಯೂರಿಯಾವನ್ನೇ ಬಳಸಲು ಇಷ್ಟ ಪಡುತ್ತಾರೆ. ದ್ರವರೂಪದ ನ್ಯಾನೋ ಬಳಕೆಗೆ ಮುಂದಾಗುತ್ತಿಲ್ಲ. ಇದಕ್ಕಾಗಿ ಇಫ್ಕೋ ಕಂಪನಿಯೂ ಕೃಷಿ ಇಲಾಖೆಯೊಂದಿಗೆ ಸೇರಿ ರೈತರ ಹೊಲಗಳಲ್ಲಿ ಪ್ರಾತ್ಯಕ್ಷಿಕೆ ನಡೆಸುತ್ತಿದೆ. ಕೃಷಿ ವಿವಿಗಳಲ್ಲಿ ನಡೆಯುವ ರೈತ ತರಬೇತಿ ಕಾರ್ಯಕ್ರಮಗಳಲ್ಲಿ ಇದರ ಪ್ರಚಾರ ನಡೆಸಲಾಗುತ್ತಿದೆ. ಆದರೂ ರೈತರಿಗೆ ಈ ಬಗ್ಗೆ ಇನ್ನೂ ನಂಬಿಕೆ ಬರುತ್ತಿಲ್ಲ. "ಅಯ್ಯೋ ಅದನ್ಯಾರು ಉಪಯೋಗಿಸುತ್ತಾರೆ. ಮಿಶ್ರಣ ಮಾಡುವುದು ಸ್ವಲ್ಪ ಏರುಪೇರಾದರೂ ಬೆಳೆ ಬರದಿದ್ದರೆ ಏನು ಮಾಡುವುದು..? " ಎಂಬ ಭಯ ಕಾಡುತ್ತಿದೆ ಎಂದು ರೈತರು ಎನ್ನುತ್ತಾರೆ.
ಪ್ರಚಾರ ಜಾಸ್ತಿಯಾಗಲಿ: ನ್ಯಾನೋ ಯೂರಿಯಾ ಸ್ವದೇಶಿ ಗೊಬ್ಬರ. ಅತ್ಯಂತ ಪರಿಣಾಮಕಾರಿಯಾಗಿದೆ. ವೆಚ್ಚವೂ ಕಡಿಮೆ. ಹೊಸ ತಂತ್ರಜ್ಞಾನ ಆಗಿರುವುದರಿಂದ ರೈತರು ಹಿಂಜರಿಯುತ್ತಿದ್ದಾರೆ. ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಇದೇ ರೀತಿ ಆಗುತ್ತದೆ. ಆದರೆ, ಈ ಬಗ್ಗೆ ಇನ್ನಷ್ಟು ಜನಜಾಗೃತಿ, ಪ್ರಚಾರ ನಡೆಸಿದರೆ ರೈತರಲ್ಲಿ ವಿಶ್ವಾಸ ಮೂಡುತ್ತದೆ. ಆಗ ತಾನೇ ಬಳಸಲು ಶುರು ಮಾಡುತ್ತಾರೆ ಎಂಬುದು ಕೃಷಿ ಇಲಾಖೆ ಅಧಿಕಾರಿ ವರ್ಗದ ಅಂಬೋಣ.ಒಟ್ಟಿನಲ್ಲಿ ನ್ಯಾನೋ ಯೂರಿಯಾ ಇದೀಗ ಹೆಚ್ಚು ಚರ್ಚೆಗೆ ಬಂದಿರುವುದಂತೂ ಸತ್ಯ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಿದರೆ ರೈತರು ಇದರತ್ತ ವಾಲಬಹುದು. ಯೂರಿಯಾ ಮೇಲಿನ ಅವಲಂಬನೆ ಕಡಿಮೆಯಾಗಬಹುದು ಎಂಬುದು ಮಾತ್ರ ಸ್ಪಷ್ಟ.
ಎಷ್ಟೆಷ್ಟು ಮಾರಾಟ?: 2021ರ ಆಗಸ್ಟ್‌ನಲ್ಲಿ ಇದು ಮಾರುಕಟ್ಟೆಗೆ ಬಂದಿದೆ. 2022ರ ಮಾರ್ಚ್ ವರೆಗೆ 8 ಲಕ್ಷ ಬಾಟಲ್, 2022-23ರಲ್ಲಿ 21 ಲಕ್ಷ, 2023-24ರಲ್ಲಿ 19 ಲಕ್ಷ, 2024-25ರಲ್ಲಿ 31 ಲಕ್ಷ, 2025-26ರ ಸಾಲಿನ ಈ 4 ತಿಂಗಳಲ್ಲಿ 17 ಲಕ್ಷ ಬಾಟಲ್ ಮಾರಾಟ ಮಾಡಲಾಗಿದೆ. ರಾಜ್ಯದಲ್ಲಿ 4 ವರ್ಷದಲ್ಲಿ 80 ಲಕ್ಷ ಬಾಟಲ್ ಮಾರಾಟ ಮಾಡಲಾಗಿದೆ. 4 ಕೋಟಿಗೂ ಅಧಿಕ ಬಾಟಲ್ ಮಾರಾಟ ಮಾಡಬೇಕಿತ್ತು. ಶೇ. 15-20ರಷ್ಟು ರೈತರು ಮಾತ್ರ ಬಳಕೆ ಮಾಡುತ್ತಿದ್ದು, ಇದು ಶೇ. 50ರ ಗಡಿ ದಾಟಬೇಕಿತ್ತು. ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂಬುದು ಇಫ್ಕೋ ಕಂಪನಿ ವಿವರಣೆ.ನ್ಯಾನೋ ಯೂರಿಯಾ ಒಳ್ಳೆಯದಾಗಿದೆ. ಹೊಸ ತಂತ್ರಜ್ಞಾನ ಆಗಿರುವುದರಿಂದ ರೈತರು ಬಳಸಲು ಹಿಂಜರಿಯುತ್ತಿದ್ದಾರೆ. ಆದರೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇನ್ನಷ್ಟು ದಿನ ಬೇಕಾಗುತ್ತದೆ.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.ನಿರೀಕ್ಷಿತ ಮಟ್ಟದಲ್ಲಿ ನ್ಯಾನೋ ಯೂರಿಯಾ ಬಳಕೆಯಾಗುತ್ತಿಲ್ಲ. ಶೇ. 50ಕ್ಕೂ ಹೆಚ್ಚು ರೈತರು ಇದನ್ನು ಈಗಾಗಲೇ ಬಳಸಲು ಶುರು ಮಾಡಬೇಕಿತ್ತು. ಶೇ. 20 ಕೂಡ ದಾಟಿಲ್ಲ. ನಾವೂ ಸಾಕಷ್ಟು ಪ್ರಚಾರ ಮಾಡುತ್ತಿದ್ದೇವೆ. ಆದರೂ ರೈತ ಸಮುದಾಯ ಬಳಕೆಗೆ ಹಿಂಜರಿಯುತ್ತಿದೆ. ಪ್ರಚಾರ ಇನ್ನಷ್ಟು ಜಾಸ್ತಿ ಮಾಡುತ್ತೇವೆ ಎಂದು ಇಫ್ಕೋ ಕಂಪನಿಯ ಕೃಷಿ ಸೇವಾ ಅಧಿಕಾರಿ ಅಭಿಷೇಕ ಕುಲಕರ್ಣಿ ಹೇಳಿದರು.