ಕೊಪ್ಪಳ:
ಮುದ್ದಾಬಳ್ಳಿ ಸಮೀಪದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎಲ್ಲ ತಯಾರಿ ಮಾಡಿಕೊಂಡು, ಈಗ ಗೊಂಡಬಾಳ ಗ್ರಾಮ ಪಂಚಾಯಿತಿಗೆ ಎನ್‌ಒಸಿ ಪಡೆಯಲು ಯುಕೆಇಎಂ ಕಂಪನಿಯು ಅರ್ಜಿ ಸಲ್ಲಿಸಿದೆ. ಗ್ರಾಪಂ ಮೂರು ಗ್ರಾಮಗಳ ಜನರಿಂದ ಆಕ್ಷೇಪಣೆ ಆಹ್ವಾನಿಸಿತ್ತು. ಮೂರು ಗ್ರಾಮಗಳ ಜನರು ಎನ್‌ಒಸಿ ಕೊಡುವುದು ಬೇಡ ಎಂದು ಈಗಾಗಲೇ ಎರಡ್ಮೂರು ಬಾರಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಮನೆ-ಮನೆಯಿಂದ ಆಕ್ಷೇಪಣೆ ಪತ್ರ:ಮೂರು ಗ್ರಾಮಗಳಲ್ಲಿ ಸೋಮವಾರ ಪ್ರತಿ ಮನೆಯ ರೈತರಿಂದ ನಮಗೆ ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆ ಬೇಡ ಎಂದು ಆಕ್ಷೇಪಣೆ ಹಾಗೂ ತಕರಾರು ಪತ್ರಗಳನ್ನು ಯುವಕರು ಸಂಗ್ರಹಿಸಿ ೪೫೦ಕ್ಕೂ ಹೆಚ್ಚು ಕುಟುಂಬಗಳಿಂದ ಪ್ರತ್ಯೇಕವಾಗಿ ಸಹಿ ಒಳಗೊಂಡಿರುವ ಆಕ್ಷೇಪಣೆ ಪತ್ರವನ್ನು ಪಿಡಿಒಗೆ ಸಲ್ಲಿಸಿದರು.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮೊದಲಿಂದಲೂ ವಿರೋಧಿಸುತ್ತಾ ಬಂದಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕರೆದಿದ್ದ ಅಹವಾಲು ಸಭೆಯಲ್ಲೂ ಆಕ್ಷೇಪಿಸಿದ್ದೇವೆ. ನಂತರದ ದಿನಗಳಲ್ಲೂ ವಿರೋಧಿಸಿದ್ದೇವೆ. ಇವುಗಳ ಮಧ್ಯೆ ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಅನುಮತಿ ನೀಡಿದೆ. ಇಲ್ಲಿನ ರೈತರ ಜೀವನೋಪಾಯಕ್ಕೆ ಸಂಕಷ್ಟ ತಂದಿಡುವ ಕೆಲಸ ಮಾಡುತ್ತಿದೆ. ಒಂದು ವೇಳೆ ಭವಿಷ್ಯದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾದರೆ ಇಲ್ಲಿನ ಪರಿಸ್ಥಿತಿ ತುಂಬ ಕೆಟ್ಟದಾಗಿರಲಿದೆ. ಕಾರ್ಖಾನೆ ಹೊರ ಸೂಸುವ ದುರ್ನಾತದಿಂದ ಯುವಕರು, ಮಕ್ಕಳು, ಗರ್ಭಿಣಿಯರು, ವೃದ್ಧರ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಕಾರ್ಖಾನೆಯ ತ್ಯಾಜ್ಯಯುಕ್ತ ನೀರು ತುಂಗಭದ್ರಾ ಹಿನ್ನೀರಿಗೆ ಸೇರಲಿದ್ದು ಅದೇ ನೀರನ್ನು ಮೂರು ಗ್ರಾಮಗಳ ಜನರು ಕುಡಿಯಲು, ನಿತ್ಯದ ಬಳಕೆಗೆ ಉಪಯೋಗ ಮಾಡಲಿದ್ದೇವೆ. ಇದರಿಂದ ರೋಗ ರುಜಿನಗಳು ಹಾಳಾಗಲಿವೆ. ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಎದುರಾಗಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪನೆ ಬೇಡ, ಎನ್‌ಒಸಿ ಕೊಡಬಾರದು ಎಂದು ಒತ್ತಾಯ ಪಿಡಿಒಗೆ ಮೂರು ಗ್ರಾಮಗಳ ಮುಖಂಡರು, ಯುವಕರು, ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು.