ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲು ಬ್ರಿಟೀಷರ ವಿರುದ್ಧ ದಿಗ್ವಿಜಯ ಸಾಧಿಸಿದ್ದು ವೀರರಾಣಿ ಕಿತ್ತೂರು ಚನ್ನಮ್ಮ. ಆ ಮಹಾ ಮಾತೆಯ ಐಕ್ಯ ಸ್ಥಳವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಮುಂದಾಗಬೇಕು ಎಂದು ಭಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ಡೊನೇರಿಯಾ ಆಗ್ರಹಿಸಿದರು.ಪಟ್ಟಣದ ಕಲ್ಮಠ ಗಲ್ಲಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ಪುಷ್ಪ ನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ 1824ರಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದು ಕನ್ನಡತಿ ಕಿತ್ತೂರು ಚನ್ನಮ್ಮ. ಆದರೆ, ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕ ಪ್ರಚಾರ ನಮ್ಮವರಿಗೆ ಸಿಗದಿರುವುದು ದುರಂತ. ನಾವು ಹೇಗೆ ನಮ್ಮ ಪಠ್ಯದಲ್ಲಿ ಝಾನ್ಸಿ ರಾಣಿ ಬಗ್ಗೆ ಓದುತ್ತೇವೋ, ಅದೇ ರೀತಿ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಉತ್ತರ ಭಾರತದ ಶಾಲಾ ಪಠ್ಯದಲ್ಲಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ವೀರ ಪರಾಕ್ರಮದ ಬಗ್ಗೆ ಅಲ್ಲಿನ ಮಕ್ಕಳು ಓದುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ರಾಣಿ ಚನ್ನಮ್ಮ ನಾಡಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾತಾಯಿ. ಅಂಥ ತಾಯಿ ಹುಟ್ಟಿ, ಬೆಳೆದ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ಶೌರ್ಯ, ಸಾಹಸ, ಸ್ವಾಭಿಮಾನ ಇದೆ. ಅದು ಕೆರಳಿ ಮತ್ತೊಂದು ಕ್ರಾಂತಿ ಆಗುವುದಕ್ಕಿಂದ ಮೊದಲೇ ಈ ನಾಡಿನ ಜನಪ್ರತಿನಿಧಿಗಳು, ರಾಜಕಾರಣಿಗಳು, ರಾಜ್ಯ ಸರ್ಕಾರ ಚನ್ನಮ್ಮನ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶೀಘ್ರ ಶಿಪಾರಸ್ಸು ಕಳುಹಿಸಬೇಕು ಎಂದು ಒತ್ತಾಯಿಸಿದರು.ವಿಶ್ವಹಿಂದು ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಗನ್ನವರ, ಜಿಲ್ಲಾ ಸಹ ಸಂಯೋಜಕ ಸುನೀಲ ಗೌರನ್ನ, ವಕೀಲರ ಸಂಘ ಅಧ್ಯಕ್ಷ ಎಂ.ಆರ್.ಮೆಳವಂಕಿ, ವಕೀಲರಾದ ಆನಂದ ವಾಲಿ, ಬಸವರಾಜ ದೋತರದ, ವಿ.ಜಿ.ಕಡತಾಳ, ವಿಜಯ ಪತ್ತಾರ, ಗೌತಮ ಇಂಚಲ, ಪುಂಡಲೀಕ ದಳವಾಯಿ, ವಿವೇಕಾನಂದ ಪೂಜಾರ, ನಾರಾಯಣ ನಲವಡೆ, ರಾಜು ಬಡಿಗೇರ, ಗಿರೀಶ ಹರಕುಣಿ, ಅನೇಕರು ಇದ್ದರು.