ರೈತರ ಹಿತದೃಷ್ಟಿಯಿಂದ ಫೇ. 21ರಿಂದ ಹಾಲಿನ ಹೊಸ ದರ ಅನ್ವಯ : ಶಾಸಕ ಬಾಲಚಂದ್ರ ಜಾರಕಿಹೊಳಿ

KannadaprabhaNewsNetwork |  
Published : Feb 18, 2025, 01:46 AM ISTUpdated : Feb 18, 2025, 11:16 AM IST
ಗೋಕಾಕ ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾಭವನದಲ್ಲಿ ನಡೆದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. | Kannada Prabha

ಸಾರಾಂಶ

ರೈತರ ಹಿತದೃಷ್ಟಿ ಮತ್ತು ಜಿಲ್ಲಾ ಹಾಲು ಒಕ್ಕೂಟದ ಬೇಡಿಕೆಯಂತೆ ನಂದಿನಿ ಹಾಲಿನ ದರದಲ್ಲಿ ಬದಲಾವಣೆಯಾಗಿದೆ. ಎಮ್ಮೆ ಹಾಲನ್ನು ₹3.40 ಮತ್ತು ಆಕಳು ಹಾಲು ಪ್ರತಿ ಲೀಟರ್‌ಗೆ ₹1 ನಂತೆ ಹೆಚ್ಚಳ ಮಾಡಲಾಗುತ್ತಿದೆ

  ಗೋಕಾಕ : ರೈತರ ಹಿತದೃಷ್ಟಿ ಮತ್ತು ಜಿಲ್ಲಾ ಹಾಲು ಒಕ್ಕೂಟದ ಬೇಡಿಕೆಯಂತೆ ನಂದಿನಿ ಹಾಲಿನ ದರದಲ್ಲಿ ಬದಲಾವಣೆಯಾಗಿದೆ. ಎಮ್ಮೆ ಹಾಲನ್ನು ₹3.40 ಮತ್ತು ಆಕಳು ಹಾಲು ಪ್ರತಿ ಲೀಟರ್‌ಗೆ ₹1 ನಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಬೆಮುಲ್ ಅಧ್ಯಕ್ಷರು, ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾಭವನದಲ್ಲಿ ಸೋಮವಾರ ಕರೆಯಲಾಗಿದ್ದ ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯ ಎಲ್ಲ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಫೆ.21ರಿಂದ ಹೊಸ ದರಗಳು ಅನ್ವಯವಾಗಲಿವೆ ಎಂದು ಹೇಳಿದರು.

ಈಗಾಗಲೇ ಎಮ್ಮೆ ಹಾಲಿಗೆ ಪ್ರತಿ ಲೀ.ಗೆ ₹41.60 ಇದ್ದು, ₹3.40 ಹೆಚ್ಚಳದಿಂದ ₹45 ಪ್ರತಿ ಲೀ.ಗೆ ಹೆಚ್ಚಳಗೊಂಡು ಸರ್ಕಾರದ ₹5 ಪ್ರೋತ್ಸಾಹಧನ ಸೇರಿ ಒಟ್ಟು ಪ್ರತಿ ಲೀ. ₹50 ರೈತರಿಗೆ ಸಿಗಲಿದೆ. ಅದರಂತೆ ಆಕಳು ಹಾಲು ಈಗ ₹29.10 ಇದ್ದು, ಇದನ್ನು ₹1 ಹೆಚ್ಚಿಸಲಾಗಿದೆ. ಸರ್ಕಾರದ ಪ್ರೋತ್ಸಾಹಧನ ಸೇರಿ ₹35.10 ಸಿಗಲಿದೆ. ಹೆಚ್ಚಳಗೊಂಡ ಹಣವು ಎಲ್ಲವೂ ಹಾಲು ಪೂರೈಕೆ ಮಾಡುತ್ತಿರುವ ರೈತರ ಖಾತೆಗಳಿಗೆ ನೇರವಾಗಿಯೆ ಜಮೆ ಆಗಲಿದೆ ಎಂದರು.

ರೈತರ ಸಹಕಾರದಿಂದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವು ಪ್ರಗತಿಪಥದತ್ತ ಸಾಗುತ್ತಿದೆ. ಮಾಸಿಕವಾಗಿ ಅಂದಾಜು ₹5 ಕೋಟಿ ಲಾಭ ಗಳಿಸುತ್ತಿದೆ. ಒಕ್ಕೂಟದ ಲಾಭಕ್ಕಿಂತ ನಮಗೆ ರೈತ ಶ್ರೇಯೋಭಿವೃದ್ಧಿಯೇ ಮುಖ್ಯವಾಗಿದೆ. ಅದಕ್ಕಾಗಿಯೇ ಪರಿಷ್ಕೃತಗೊಂಡ ದರವನ್ನು ರೈತರಿಗೆ ನೀಡಲು ನಮ್ಮ ಒಕ್ಕೂಟವು ತೀರ್ಮಾನಿಸಿದೆ ಎಂದು ಹೇಳಿದರು.

ಸಂಘವು ಬೆಳೆಯಬೇಕಾದರೇ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರಮ ದೊಡ್ಡದಿದೆ. ರೈತರ ಉಳಿವಿಗೆ ಇವರಿಬ್ಬರೂ ಸೇರಿ ದುಡಿದರೇ ನಮ್ಮ ಒಕ್ಕೂಟವು ಸಹ ಪ್ರಗತಿ ಸಾಧಿಸುತ್ತದೆ. ಮುಂದಿನ ಜೂನ್ ತಿಂಗಳ ನಂತರ ಸಿಬ್ಬಂದಿ ಬೇಡಿಕೆಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಯದರ್ಶಿಗಳಿಗೆ ಒಕ್ಕೂಟದಿಂದ ಜೀವವಿಮೆ ಮಾಡಿಸುವ ಉದ್ದೇಶ ಸಹ ಇಟ್ಟುಕೊಂಡಿದ್ದೇವೆ ಎಂದರು.

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ಮಾದರಿ ಮಾಡುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ಮೇಗಾಡೈರಿ ಸ್ಥಾಪಿಸುವ ಮಹತ್ವಾಕಾಂಕ್ಷೆ ನನ್ನದಾಗಿದೆ. ಇದಕ್ಕಾಗಿ ಪ್ರತಿನಿತ್ಯ 4 ಲಕ್ಷ ಲೀ. ಹಾಲು ಸಂಗ್ರಹವಾಗಬೇಕು. ಮುಂದಿನ ದಿನಗಳಲ್ಲಿ ಈ ಗುರಿ ತಲುಪಬೇಕಾಗಿದೆ. ಇದಕ್ಕಾಗಿ ರೈತರು ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಸಂಘಕ್ಕೆ ಪೂರೈಕೆ ಮಾಡಿದ ರೈತರಿಗೆ ಕೇವಲ ಹತ್ತು ದಿನಗಳೊಳಗೆ ಬಿಲ್‌ ಸಂದಾಯ ಮಾಡಲು ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮಾರ್ಚ್‌ ತಿಂಗಳ ಅಂತ್ಯದೊಳಗೆ ಸುಮಾರು ₹400 ಕೋಟಿ ವಾರ್ಷಿಕ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಬೆಮುಲ್ ನಿರ್ದೇಶಕರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ.ಬಸವರಾಜ ಪರವನ್ನವರ, ಬಾಬುರಾವ ವಾಗ್ಮೋಡೆ, ವೀರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಭೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ನಾಮನಿರ್ದೆಶಿತ ನಿರ್ದೇಶಕರಾದ ಸದಾಶಿವ ದೇಶಿಂಗೆ, ರವೀಂದ್ರ ಪಾಟೀಲ, ಡಾ.ರಾಜೀವ ಕುಲೇರ, ಜಯಕುಮಾರ, ಡಾ.ಕೃಷ್ಣ ಕ್ಯೂರ್, ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎನ್. ಶ್ರೀಕಾಂತ ಉಪಸ್ಥಿತರಿದ್ದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಸ್ಯೆಗಳನ್ನು ಬಾಲಚಂದ್ರ ಜಾರಕಿಹೊಳಿ ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌