ಹಾವೇರಿ: ಆರ್‌ಸಿಎಚ್ ಪೋರ್ಟಲ್ ಪ್ರಕಾರ ಅಪ್ರಾಪ್ತ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಾಗಿ ೧೬ರಿಂದ ೧೮ ವರ್ಷದ ವಯಸ್ಸಿನ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಹೇಳಿದರು.ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ (ಸಿಆರ್‌ಪಿ) ಆಯೋಜಿಸಲಾದ ಬಾಲನ್ಯಾಯ ಕಾಯ್ದೆ-೨೦೧೫, ತಿದ್ದುಪಡಿ ಕಾಯ್ದೆ-೨೦೨೧, ಪೋಕ್ಸೋ ಕಾಯ್ದೆ-೨೦೧೨, ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ ತಿದ್ದುಪಡಿ ಕಾಯ್ದೆ-೨೦೦೮ರ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ೧೬ರಿಂದ ೧೮ ವಯಸ್ಸಿನ ಮಕ್ಕಳು ಹೆಚ್ಚಾಗಿ ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದರು.ಬಾಲ್ಯ ವಿವಾಹಗಳನ್ನು ತಡೆಯುವ ಮೂಲಕ ಅವರಿಗೆ ಶಿಕ್ಷಣ ನೀಡಿ, ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸಮುದಾಯದವರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಮಕ್ಕಳಿಗೆ ಬಾಲ್ಯವನ್ನು ಅನುಭವಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಿ, ಇತ್ತೀಚಿನ ದಿನಮಾನದಲ್ಲಿ ಅಪ್ರಾಪ್ತ ತಾಯಂದಿರು ಹೆಚ್ಚಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಹೆಣ್ಣು ಮಕ್ಕಳಿಗೆ ಕಿಶೋರಾವಸ್ಥೆಯಲಿ ಬಾಲ್ಯ ವಿವಾಹವನ್ನು ಮಾಡುವುದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಯಾಗಿರುವುದಿಲ್ಲ. ಇದರಿಂದ ಅಪೌಷ್ಟಿಕ ಮತ್ತು ಅನಿಮಿಯಾದಿಂದ ಬಳಲುವ ಮಕ್ಕಳು ಜನಿಸುತ್ತಾರೆ. ತಾಯಂದಿರ ಮತ್ತು ಶಿಶು ಮರಣ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಜವಾಬ್ದಾರಿಯುತ ಕಾರ್ಯವಾಗಿದೆ. ಸಮೂಹ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ) ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕೆಂದು ಹಾಗೂ ಮಕ್ಕಳ ಶಿಕ್ಷಣ ಹಾಗೂ ಇತರ ಚಟುವಟಿಕೆ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ ಮಾತನಾಡಿ, ಏಪ್ರಿಲ್‌ನಿಂದ ಜೂನ್ ವರೆಗೆ ೨೯ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ೧೩ ಅಪ್ರಾಪ್ತ ಗರ್ಭಿಣಿಯರಿದ್ದಾರೆ. ೨೪ ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, ಎರಡು ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಜಿಲ್ಲೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.