ಕನ್ನಡಪ್ರಭ ವಾರ್ತೆ ಬಸವಕಲ್ಯಾಣಮಕ್ಕಳಿಗೆ ಬಾಲ್ಯದಿಂದಲೇ ಶರಣ ಸಂಸ್ಕೃತಿಯ ಅರಿವು ಮೂಡಿಸುವುದು ಬಹಳ ಮುಖ್ಯ. ಮಕ್ಕಳಿಗೆ ಚಿಕ್ಕವರಿದ್ದಾಗ ಕೊಟ್ಟ ಸಂಸ್ಕಾರ ಮುಂದೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದರು.ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮೇ 6ರಿಂದ 10ರ ವರೆಗೆ ಮಕ್ಕಳಿಗಾಗಿ ನಡೆದ ಶರಣ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಸಮಾಜದ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು ಅವುಗಳನ್ನು ಹೆಚ್ಚಿಸುವಲ್ಲಿ ಇಂತಹ ಸಂಸ್ಕಾರ ಶಿಬಿರಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಎಲ್ಲಾ ಕಡೆ ಇಂತಹ ಶಿಬಿರಗಳನ್ನು ನಡೆಸುವ ಅವಶ್ಯಕತೆ ಇದೆ ಎಂದರು.ಕೂಡಲಸಂಗಮದ ಬಸವ ಧರ್ಮಪೀಠದ ಜಗದ್ಗುರು ಡಾ. ಗಂಗಾ ಮಾತಾಜಿ ಮಾತನಾಡಿ, ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವ ಹಾಗೆ ಮಕ್ಕಳಿಗೆ ಸರಿಯಾದ ಸಂಸ್ಕಾರದೊಂದಿಗಿನ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ಎಂಬ ಗಾದೆ ಮಾತಿನಂತೆ ಮಕ್ಕಳನ್ನು ಎಳೆ ವಯಸ್ಸಿನಲ್ಲಿ ತಿದ್ದಿದರೆ ಮುಂದೆ ದೊಡ್ಡವರಾದ ಮೇಲೆ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ ಎಂದು ಹೇಳಿದರು.ಡಾ. ಗಂಗಾಬಿಕೆ ಅಕ್ಕನವರು ಇದ್ದರು. ಗುರುಬಸವ ಪಟ್ಟದ್ದೇವರು ಪ್ರಾಸ್ತಾವಿಕ ಮಾತನಾಡಿ, ಬಸವಕಲ್ಯಾಣದಲ್ಲಿ ಸತತ ಮೂರು ವರ್ಷಗಳಿಂದ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ ಸಹಯೋಗದೊಂದಿಗೆ ಮಕ್ಕಳ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದರಿಂದ ನೂರಾರು ಮಕ್ಕಳಿಗೆ ಸಂಸ್ಕಾರ ದೊರೆಯುವಂತಾಗಿದೆ ಎಂದರು.
ಅನುಭವ ಮಂಟಪದ ಸಂಚಾಲಕರಾದ ಶಿವಾನಂದ ಮಹಾಸ್ವಾಮಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ್ ಮೂಳೆ ಮಾತನಾಡಿ. ಇಂದಿನ ಮಕ್ಕಳಿಗೆ ಇಂತಹ ಶಿಬಿರಗಳ ಅವಶ್ಯಕತೆ ಬಹಳಷ್ಟು ಇದೆ. ಈ ಶಿಬಿರವನ್ನು ಆಯೋಜನೆ ಮಾಡಿದ ಪೂಜ್ಯರಿಗೆ ಕೃತಜ್ಞತೆ ತಿಳಿಸಿದರು.ಮೌಲ್ಯಮಾಪನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ತನುಶ್ರೀ ರಾಜರೆಡ್ಡಿ, ಪ್ರೀತಿ ನಾಗಪ್ಪ, ದ್ವಿತೀಯ ಸ್ಥಾನ ಪಡೆದ ನಿವೇದಿತಾ ಅಮರೇಶ ಕೊಡ್ಲಿ ಹಾಗೂ ತೃತೀಯ ಸ್ಥಾನ ಪಡೆದ ಅನುಶ್ರೀ ಶ್ರೀಕಾಂತ್ ಮತ್ತು ಶಿವಪ್ರಸಾದ್ ಶರಣಯ್ಯ ಒಟ್ಟು ಐದು ಮಕ್ಕಳಿಗೆ ಪೂಜ್ಯರು ಪ್ರಶಸ್ತಿ ಪತ್ರಗಳನ್ನು ಮತ್ತು ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ನೀಡಿದರು.ಮಹಾರಾಷ್ಟ್ರದ ಖ್ಯಾತ ಪ್ರವಚನಕಾರರಾದ ಶಿವಾನಂದ ಹೈಬತಪೂರೆ, ಬಸವಕಲ್ಯಾಣದ ಸುಗುಣಾ ತಾಯಿ, ಹಾಲಮ್ಮ ತಾಯಿ, ಶಿವಬಸವ ದೇವರು, ವೀರಶೆಟ್ಟಿ ಇಮಡಾಪುರ, ಪ್ರಭುಲಿಂಗ ದೇವರು, ಬಸವ ದೇವರು ಇದ್ದರು.--ಚಿತ್ರ 10ಬಿಡಿಆರ್55ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಮೇ 6ರಿಂದ 10ರ ವರೆಗೆ ಮಕ್ಕಳಿಗಾಗಿ ನಡೆದ ಶರಣ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ಜರುಗಿತು.---