ಕನ್ನಡಪ್ರಭ ವಾರ್ತೆ ಕೋಲಾರಬಸವ ಜಯಂತಿ ವರ್ಷಕ್ಕೊಮ್ಮೆ ಸೀಮಿತಗೊಳಿಸದೆ ಬಸವ ವಚನ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿ ದಿನವೂ ಬಸವ ಜಯಂತಿ ಆಚರಿಸುವಂತಾದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣುತ್ತದೆ ಎಂದು ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ್ ಬಿ.ಜತ್ತಿ ಅಭಿಪ್ರಾಯಪಟ್ಟರು.ನಗರದ ಶ್ರೀ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗವು ಅರಳೇಪೇಟೆಯ ಶ್ರೀ ಬಸವೇಶ್ವರ ದೇವಾಸ್ಥಾನದ ಆವರಣದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರ ವಚನಗಳಲ್ಲಿ ಕನಿಷ್ಠ ಒಂದನ್ನು ಅಳವಡಿಸಿಕೊಂಡರೆ ಸಾಕು ಜೀವನದಲ್ಲಿ ಪರಿವರ್ತನೆ ಕಾಣಬಹುದಾಗಿದೆ ಎಂದರು.ಮಕ್ಕಳಿಗೆ ವಚನಗಳ ಅರಿವು ಮೂಡಿಸಿ
ಶಿವ ಪೂಜೆ ಮಾಡುವಾಗ ಲೌಕಿಕ ಚಿಂತನೆ ಹಾಗೂ ಪಿಂಡಾಂಡಗಳ ಚಿಂತನೆ ಮರೆತು ಶ್ರದ್ದಾ ಭಕ್ತಿಯಿಂದ ಮಾಡಿದಾಗ ಮಾತ್ರ ಮನದ ಒಡೆಯನಾದ ಶಿವನನ್ನು ಕಾಣಲು ಸಾಧ್ಯ, ಪರಂಪರೆ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತುವುದಲ್ಲ, ಮನದೊಳಗೆ ಮನದ ಒಡೆಯನು ಇರಬೇಕು, ಮಕ್ಕಳಿಗೆ ವಚನಗಳ ಅರಿವು ಮೂಡಿಸಿದಾಗ ಅವರ ಭವಿಷ್ಯವು ಸುಂದರವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ನಾಗಲಾಪುರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಬಸವಣ್ಣ ವಚನಗಳನ್ನು ನಿತ್ಯ ಕಾಯಕದಲ್ಲಿ ತೊಡಗಿಸಿಕೊಂಡು ಪ್ರತಿಯೊಬ್ಬರೂ ಆಧುನಿಕ ಬಸವಣ್ಣ ಆಗಬೇಕು, ವಚನಗಳ ಮೂಲಕ ಜೀವನದಲ್ಲಿ ಕಾಣುವಂತಾಗಬೇಕು, ನಮ್ಮ ನಡೆ ನುಡಿಗಳಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಾಗ ಬೇಕು ಎಂದು ಹೇಳಿದರು.
ಅರವಿಂದ ಜತ್ತಿಗೆ ಸನ್ಮಾನಬಸವಣ್ಣ ತತ್ವಗಳನ್ನು ಮೈಗೊಡಿಸಿಕೊಂಡಿರುವ ವಿಶ್ವದಾದ್ಯಂತ ಪ್ರಸಾರ ಮಾಡುತ್ತಿರುವಂತ ಡಾ.ಅರವಿಂದ ಬಿ.ಜತ್ತಿರಿಗೆ ಅಭಿನಂದಿಸಿ ಸನ್ಮಾನಿಸಿದರು. ಶರಣೆಯರ ಬಳಗದ ಅಧ್ಯಕ್ಷೆ ಉಷಾಗಂಗಾಧರ್, ಶರಣೆಯರ ಬಳಗದ ವಿಮಾಲ ಬೈಲಪ್ಪ, ಶ್ರೀ ಬಸವೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಸಿ.ಗಂಗಾಧರ್, ಉಪಾಧ್ಯಕ್ಷ ಕೆ.ಬಿ.ಬೈಲಪ್ಪ ಇದ್ದರು.