೨ ನೇ ದಿನದ ಸಂಕಲ್ಪ ಉತ್ಸವಕ್ಕೆ ಚಾಲನೆ ನೀಡಿದ ಬಾರಕೂರು ಸ್ವಾಮೀಜಿಕನ್ನಡಪ್ರಭ ವಾರ್ತೆ ಯಲ್ಲಾಪುರ
ಮಕ್ಕಳನ್ನು ಪದವೀಧರರನ್ನಾಗಿಸದೇ ವಿದ್ಯಾವಂತರನ್ನಾಗಿಸಿ, ಸಂಸ್ಕಾರವಂತರನ್ನಾಗಿಸಿ. ನಿಮ್ಮ ಮಕ್ಕಳನ್ನು ಹಾಸ್ಟೇಲಿಗೆ ಕಳಿಸಿದರೆ ಮುಂದೆ ನಿಮ್ಮನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ಯುವ ದಂಪತಿಗಳು ವಿಚ್ಚೇದನದತ್ತ ವಾಲುತ್ತಿದ್ದಾರೆ. ಇದು ಆತಂಕದ ವಿಷಯ ಎಂದು ಉಡುಪಿಯ ಬಾರಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷಭಾರತೀ ಶ್ರೀಪಾದರು ನುಡಿದರು.ಶನಿವಾರ ೩೯ನೇ ಸಂಕಲ್ಪ ಉತ್ಸವದ ೨ನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
೬೦ರವರೆಗೆ ನಿನ್ನ ಮನೆ, ಮಕ್ಕಳು, ಕುಟುಂಬದ ಬಗೆಗೆ ಚಿಂತನೆ ಮಾಡು; ೬೦ರ ನಂತರ ನನ್ನ ಆರಾಧನೆ ಮಾಡು ಎಂದು ಭಗವಂತ ತಿಳಿಸಿದ್ದಾನೆ. ಇದು ನಮ್ಮ ಪರಂಪರೆಯಿಂದ ಬಂದಿದೆ. ಭಾರತೀಯ ಸಂಸ್ಕೃತಿಯ ತಿರುಳನ್ನು ನೋಡಿ, ವಿಶ್ವವೇ ಆಶ್ಚರ್ಯಪಡುತ್ತಿದೆ. ನಮ್ಮ ಪರಂಪರೆಯಲ್ಲಿ ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣ ಅಡಗಿದೆ. ಧರ್ಮದ ಚೌಕಟ್ಟನ್ನು ನಮ್ಮ ಋಷಿಮುನಿಗಳು ನೀಡಿದ್ದಾರೆ ಎಂದ ಶ್ರೀಗಳು, ಭವಿಷ್ಯತ್ತಿನ ದೃಷ್ಟಿಯಿಂದ ಯುವಕರು ಮೂರು ಸಂತತಿ ಪಡೆಯಬೇಕು. ಅವರಲ್ಲಿ ಒಬ್ಬರನ್ನು ಮಠಕ್ಕೆ ನೀಡಬಹುದು. ನಾವು ನೋಡಿಕೊಳ್ಳುತ್ತೇವೆ. ಇಂದು ಹೊಸ ಶೈಲಿ ಪ್ರಾರಂಭವಾಗಿದೆ. ಗಂಡನಿಗೆ ಏಕವಚನದಲ್ಲಿ ಮಾತನಾಡಿಸುತ್ತಾರೆ. ಇದು ಅತ್ಯಂತ ಅಪ್ರಬುದ್ಧತೆಯ ಲಕ್ಷಣ. ಅದರಿಂದ ಕುಟುಂಬಕ್ಕೆ ಅನೇಕ ರೀತಿಯ ತೊಂದರೆಗಳು ಬರುತ್ತವೆ. ನಮ್ಮ ಧರ್ಮದಲ್ಲಿ ಸತಿಪತಿಗಳಿಗೂ ಪ್ರತ್ಯೇಕ ಸ್ಥಾನವನ್ನು ಕಲ್ಪಿಸಲಾಗಿದೆ. ಆ ನೆಲೆಯಲ್ಲೇ ಸಾಗಿದಾಗ ಮಾತ್ರ ಉತ್ತಮ ಕುಟುಂಬ, ಶ್ರೇಷ್ಠ ಜೀವನವನ್ನು ನಡೆಸಬಹುದು. ನಮ್ಮ ಹೆಣ್ಣುಮಕ್ಕಳು ಕಂಡಕಂಡವರ ಬೈಕ್ ಹತ್ತದಿದ್ದರೆ ಲವ್ ಜಿಹಾದ್ ಹೇಗೆ ಸಾಧ್ಯ?. ಇಂದು ವಿಚ್ಛೇದನಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದಕ್ಕೆ ತಾಯಿ ಮಗಳಿಗೆ ಸಂಸ್ಕಾರ ನೀಡದೇ ತಪ್ಪು ದಾರಿಯಲ್ಲಿ ಸಾಗಲು ಪ್ರೇರೇಪಿಸುವುದೇ ಕಾರಣವಾಗಿದೆ. ಜಗತ್ತಿನಲ್ಲಿ ಹೂವು ಮಾತ್ರ ಅರಳುತ್ತದೆ. ಅದನ್ನು ದೇವರಿಗೆ ಅರ್ಪಿಸಿ, ನಮ್ಮನ್ನು ಅರಳಿಸು ಎಂದು ಪ್ರಾರ್ಥಿಸುತ್ತೇವೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಬೇಡ ಎನ್ನಲಾಗುತ್ತದೆ. ಜಾತೀಯತೆಯ ನೆಲೆಯಲ್ಲೇ ವ್ಯವಸ್ಥೆ ಹೊರಟಿದೆ. ಆದರೆ ಪ್ರತೀ ಜಾತಿಯಲ್ಲೂ ವಿಭಿನ್ನ ಸಂಪ್ರದಾಯವಿದೆ. ಅದು ಉಳಿಯಬೇಕು ಎಂದ ಶ್ರೀಗಳು, ಭವಿಷ್ಯತ್ತು ಬಹು ಆತಂಕದ ಸನ್ನಿವೇಶವನ್ನು ಹುಟ್ಟುಹಾಕುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಶಿವಾಜಿಯ ಹಾಗೆ ಧರ್ಮದ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದು ಶ್ರೀಗಳು ಮಾರ್ಮಿಕವಾಗಿ ಹೇಳಿದರು.ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ದೇಶ ಸುಭೀಕ್ಷೆಗೊಳ್ಳಬೇಕಾದರೆ ಇತಿಹಾಸ ಅರಿತು, ವರ್ತಮಾನದ ಬಗ್ಗೆ ಚಿಂತಿಸಿ, ಭವಿಷ್ಯದ ಬಗ್ಗೆ ಯೋಚಿಸುವ ಆರೋಗ್ಯವಂತ ಸಮಾಜದ ಮನುಷ್ಯ ಮಾತ್ರ ಒಳಿತನ್ನೇ ಮಾಡುವವರು ಶ್ರೇಷ್ಠರು. ಅಂತಹ ಉತ್ತಮರ ಸಾಲಿನಲ್ಲಿ ಪ್ರಮೋದ ಹೆಗಡೆ ಕುಟುಂಬ ಮುಂದುವರೆದಿದೆ ಎಂದರು.
ಕಾರವಾರದ ಹಿರಿಯ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಪ್ರತಿಯೊಂದನ್ನೂ ಹಣದಲ್ಲೇ ಅಳೆಯುವ ಹಣವೇ ಪ್ರಧಾನವೆಂಬ ಭ್ರಮೆಯಲ್ಲಿ ಸಮಾಜ ಮುನ್ನಡೆಯುತ್ತಿದೆ ಎಂದರು.ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಬಹುವರ್ಷ ಸಾಧನೆ ಮಾಡಿದ ಕವಿ ಯಮುನಾ ನಾಯ್ಕ, ಕೃಷಿ ಕ್ಷೇತ್ರದ ಸಾಧಕ ಕಲ್ಲಪ್ಪ ನಾಯ್ಕ ಕಲಕರಡಿ ಇವರನ್ನು ಶ್ರೀಗಳು ಸಂಕಲ್ಪ ಪ್ರಶಸ್ತಿ ನೀಡಿ ಗೌರವಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಲೋಕಧ್ವನಿ ಪತ್ರಿಕೆಯ ಸ್ಥಾನಿಕ ಸಂಪಾದಕ ನಾಗರಾಜ ಮತ್ತಿಹಳ್ಳಿ, ತತ್ವನಿಷ್ಠ ದೈನಿಕದ ಸಂಪಾದಕ ಪ್ರವೀಣ ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬಿ, ಸದಾನಂದ ಭಟ್ಟ ಹಳವಳ್ಳಿ, ಬಸವರಾಜ ಓಸಿಮಠ, ಮಹೇಶ ದೇಸಾಯಿ ಉಪಸ್ಥಿತರಿದ್ದರು.
ಶಾರದಾಂಬಾ ಪಾಠಶಾಲಾ ವಿದ್ಯಾರ್ಥಿಗಳಾದ ಸುಮುಖ ಭಟ್ಟ, ಮಧುಕೇಶ್ವರ ಹೆಗಡೆ ವೇದಘೋಷ ಪಠಿಸಿದರು. ಪ್ರಭಾತ ಭಟ್ಟ ಪ್ರಾರ್ಥಿಸಿದರು. ಸಂಕಲ್ಪದ ಅಧ್ಯಕ್ಷ ಪ್ರಮೋದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಚಂದ್ರಶೇಖರ ಸಿ.ಎಸ್. ನಿರ್ವಹಿಸಿದರು.