ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ: ಜಿ.ಸುರೇಂದ್ರ

KannadaprabhaNewsNetwork |  
Published : Mar 25, 2026, 02:45 AM IST
 | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈ ಜಗವನ್ನು ಆಳುತ್ತಿದೆ ಎಂದು ಕೊಡಗು 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ ಹೇಳಿದರು.

ಮಡಿಕೇರಿ: ಪ್ರಸ್ತುತ ದಿನಗಳಲ್ಲಿ ತೊಟ್ಟಿಲು ತೂಗುವ ಕೈ ಜಗವನ್ನು ಆಳುತ್ತಿದೆ ಎಂದು ಕೊಡಗು 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ ಹೇಳಿದರು.

ಮಹಿಳೋದಯ ಮಹಿಳಾ ಒಕ್ಕೂಟ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 20ನೇ ಶತಮಾನದ ಆರಂಭದಲ್ಲಿ ಉತ್ತರ ಅಮೇರಿಕಾ ಮತ್ತು ಯುರೋಪ್‍ನಲ್ಲಿ ನಡೆದ ಕಾರ್ಮಿಕ ಚಳುವಳಿಗಳಿಂದ ಮಹಿಳಾದಿನ ಹುಟ್ಟಿಕೊಂಡಿತು. 1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತಗೊಳಿಸಿತು. ಮಹಿಳೆಯರ ಸಾಧನೆಗಳನ್ನು ಗೌರವಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು ಮತ್ತು ಸಮಾಜದಲ್ಲಿ ಸಮಾನತೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಜಿ.ಸುರೇಂದ್ರ ಹೇಳಿದರು.

ಇಂದಿನ ಸಮಾಜದಲ್ಲಿ ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಮತ್ತು ವ್ಯಾಪಾರ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಂತೆ ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸಿ.ಜೆ.ಎಂ ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ವೀರಭದ್ರಯ್ಯ ಮಾತನಾಡಿ, ದೇಶದಲ್ಲಿ ಶೇ.20 ರಷ್ಟು ಮಹಿಳೆಯರು ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಪುರುಷರಷ್ಟೇ ಮಹಿಳೆಯರಿಗೂ ಕೂಡ ಸಮಾನ ಅವಕಾಶ ಕಲ್ಪಿಸಿದಲ್ಲಿ ಲಿಂಗ ತಾರತಮ್ಯ ದೂರವಾಗುತ್ತದೆ. ಆದ್ದರಿಂದ ಮಹಿಳೆಯರಿಗೆ ನೀಡಿದ ಕಾನೂನನ್ನು ಸದುಪಯೋಗಪಡಿಸಿಕೊಂಡು ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೂ ಕಾರಣರಾಗುವಂತೆ ಸಲಹೆ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಮಾತನಾಡಿ, ಮಹಿಳಾ ದಿನಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸರ್ಕಾರ ಸಂವಿಧಾನಾತ್ಮಕವಾಗಿ ಸಾಕಷ್ಟು ಅವಕಾಶ ನೀಡಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಯಾವುದೇ ಸಮಸ್ಯೆಗಳಿದ್ದಲ್ಲಿ ಅಂಗವಾಡಿ ಮತ್ತು ಸಿಡಿಪಿಒ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಂಕಷ್ಟದಲ್ಲಿರುವ ಮಹಿಳೆಯರಿಗೆ 181 ಮಹಿಳಾ ಸಹಾಯವಾಣಿಯು ಆರಂಭಗೊಂಡಿದ್ದು, 24*7 ತಕ್ಷಣದ ನೆರವು ಒದಗಿಸುವ ಟೋಲ್-ಫ್ರೀ, ಉಚಿತ ಸೇವೆ ಲಭ್ಯ ಇರುವುದಾಗಿ ತಿಳಿಸಿದರು.ಮಹಿಳೆಯರು ಗೌರವಯುತವಾಗಿ ಬೆಳೆದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ಮಹಿಳಾ ಒಕ್ಕೂಟ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಕಾರ ನೀಡುತ್ತಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.

ತಾರತಮ್ಯ ಮಾಡಬೇಡಿ: ಮೈಸೂರು ಒಡಿಪಿ ಯೋಜನಾ ಸಂಯೋಜಕರಾದ ಮೋಲಿ ಪೊಡ್ತಾದೊ ಅವರು ಮಾತನಾಡಿ, ಮಹಿಳಾ ದಿನವು ಕೇವಲ ಆಚರಣೆಯ ದಿನವಲ್ಲ. ಪ್ರಸ್ತುತ ದಿನಗಳಲ್ಲಿಯೂ ಸಮಾನತೆ, ಸಾಕ್ಷರತೆ, ಅವಕಾಶ ಮತ್ತು ಸುರಕ್ಷತೆಗಾಗಿ ಹೋರಾಟ ಮುಂದುರೆಯುತ್ತಿದೆ. ಇದಕ್ಕೆ ಮಹಿಳೆಯರೇ ಮುಖ್ಯ ಕಾರಣ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಗಂಡು ಹೆಣ್ಣು ಎಂದು ತಾರತಮ್ಯ ಮಾಡಬಾರದು. ಲಿಂಗ ತಾರತಮ್ಯ ಕಡಿಮೆ ಆದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಮಹಿಳೆಯರು ಸಮಾನತೆ ಮತ್ತು ಗೌರವಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು. ಮೈಸೂರು ಒಡಿಪಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾದರ್ ಜಾನ್ ಫೆರ್ನಾಂಡಿಸ್ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಸ್ಮರಿಸುವ ದಿನ. ಮಹಿಳಾ ಸಾಧನೆಯನ್ನು ಗುರುತಿಸುವ ದಿನ. ಮಹಿಳೆಯರ ಪಾತ್ರ ಸಮಾಜದಲ್ಲಿ ಹೇಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ, ಹೆಣ್ಣು ಎನ್ನುವುದು ಕಣ್ಣುಗಳಂತೆ. ಅತ್ತೆಯನ್ನು ತಾಯಿಯಾಗಿ ನೋಡಬೇಕು. ಪೋಷಕರು ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಲಹೆಗಳನ್ನು ನೀಡಿ ಬೆಳೆಸಬೇಕು. ದೊಡ್ಡವರನ್ನು ಗೌರವಿಸುವ ಕೆಲಸವನ್ನು ಮಾಡಬೇಕು. ಆಗ ಕುಟುಂಬ ಒಗ್ಗಟ್ಟಿನಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮಾರ್ಗದರ್ಶನದಿಂದ ಪ್ರಗತಿ: ಪ್ರಾಸ್ತಾವಿಕ ಮಾತನಾಡಿದ ಒಡಿಪಿ ಸಂಸ್ಥೆಯ ಜಿಲ್ಲಾ ವಲಯ ಸಂಯೋಜಕರಾದ ಜಾಯ್ಸ್ ಮೆನೆಜಸ್ ಅವರು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವುದೇ ಒಂದು ದೇಶ ಅಥವಾ ಸಂಘ ಸಂಸ್ಥೆಗಳಿಗೆ ಸೀಮಿತವಾಗಿಲ್ಲ. ಇಡೀ ವಿಶ್ವದಾದ್ಯಂತ ಇದನ್ನು ಆಚರಿಸುವುದರಿಂದ ಈ ದಿನಕ್ಕೆ ವಿಶೇಷವಾದ ಮಹತ್ವವಿದೆ ಮತ್ತು ಇದಕ್ಕೆ ಲಿಂಗ ತಾರತಮ್ಯ ಇರುವುದಿಲ್ಲ. ಮಹಿಳೆಯರಿಗೆ ಶಿಕ್ಷಣ, ಸಂಪನ್ಮೂಲಗಳು, ತರಬೇತಿ ಕಾನೂನಿನ ಅರಿವು ಮತ್ತು ಮಾರ್ಗದರ್ಶನ ನೀಡುವ ಮೂಲಕ ಇಡೀ ಸಮುದಾಯವು ಪ್ರಗತಿ ಹೊಂದುತ್ತದೆ ಎಂದು ಹೇಳಿದರು. ಒಡಿಪಿ ಒಕ್ಕೂಟದ ಮಾಜಿ ಅಧ್ಯಕ್ಷೆ ಜುಲೆಕಾಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಮಯಂತಿ, ಮಹಿಳೋದಯ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಲಲಿತಾ, ಸದಸ್ಯರಾದ ನೀಮಾ, ಹೀನ, ಹಸೀನಾ, ಲೂಸಿ ಜೇಮ್ಸ್, ಮೀನಾ ಕುಮಾರಿ, ರೇಣು ಕುಮಾರಿ, ಮಮತ, ಸಿಬ್ಬಂದಿ ಸಿ.ಎಸ್.ಅಕ್ಷಯ್, ಕಾನೂನು ಪ್ರಾಧಿಕಾರದ ಸಿಬ್ಬಂದಿ ಜಯಪ್ಪ, ಇಲಾಖೆ ಸಿಬ್ಬಂದಿಗಳು ಇದ್ದರು. ಪ್ರಕೃತಿ ಸಂಘದ ಸದಸ್ಯರು ಪ್ರಾರ್ಥಿಸಿದರು. ಒಡಿಪಿ ಸಂಸ್ಥೆಯ ಕಾರ್ಯಕರ್ತೆ ವಿಜಯ ನಾರಾಯಣ, ಜಯಲಕ್ಷ್ಮಿ ನಿರೂಪಿಸಿದರು. ಹಸ್ತ ಸಂಘದ ಅಧ್ಯಕ್ಷೆ ಸರಿತಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ. 29, 30ರಂದು ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನ
ಕರಿಕೆ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ