ಮರಿಯಮ್ಮನಹಳ್ಳಿ: ವಿಶೇಷಚೇತನರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಜಿ. ನಾಗಲಾಪುರ ಪಿಡಿಒ ಜಿಲಾನ್ ಸಾಹೇಬ್ ಹೇಳಿದರು.
ಸ್ಥಳೀಯ ಗ್ರಾಮ ಪಂಚಾಯಿತಿಗಳ ಒಟ್ಟು ಅನುದಾನದಲ್ಲಿ ವಿಶೇಷಚೇತನರಿಗೆ ಸಾಮೂಹಿಕವಾಗಿ ಅವರ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಶೇ.5 ಹಣವನ್ನು ಮೀಸಲಿರುತ್ತದೆ. ಈಗಾಗಲೇ ಜಿ.ನಾಗಲಾಪುರ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಮತ್ತು ಜಿ. ನಾಗಲಾಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ವಿಶೇಷಚೇತನರಿಗ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಯಂ ಉದ್ಯೋಗ ಕಂಡುಕೊಂಡು ಆರ್ಥಿಕಾಭಿವೃದ್ದಿ ಹೊಂದಲು ಮುಂದಾಗಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನಾಗರಾಜ ಮಾತನಾಡಿ, ಸರ್ಕಾರ ನಮ್ಮಂತಹ ವಿಶೇಷ ಚೇತನರಿಗೆ ಸಾಕಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ಅವುಗಳನ್ನ ಸರಿಯಾಗಿ ಬಳಸಿಕೊಂಡು ನಮ್ಮ ಜೀವನ ರೂಪಿಸಿಕೊಳ್ಳಬೇಕು. ಜೊತೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾಸಗಿ ಸಹಭಾಗಿತ್ವದಲ್ಲಿ ನಾವಿರುವ ಸ್ಥಳದಲ್ಲಿ ಕಂಪ್ಯೂಟರ್ ತರಬೇತಿ ಆಯೋಜನೆ ಮಾಡಿರುವುದು ನಮಗೆ ತುಂಬಾ ಖುಷಿ ತಂದಿದೆ ಎಂದರು.ಜಿ. ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿಪ್ಲಿ ಬಾಯಿ ನಾರಾಯಣ ನಾಯ್ಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಂಜಿನಪ್ಪ, ಹನುಮಂತ, ಜಿ. ರವಿಕುಮಾರ್, ಪಂಚಾಯಿತಿ ಸಿಬ್ಬಂದಿ ದ್ವಿತೀಯ ದರ್ಜೆ ಸಹಾಯಕ ಬಿ. ರವಿಕುಮಾರ್, ಪ್ರದೀಪ್ ಕುಮಾರ್ ಹಾಗೂ ವಿಶೇಷ ಚೇತನರು ಮತ್ತು ಪೋಷಕರು ಭಾಗಿಯಾಗಿದ್ದರು.