ಶಾಸಕರ ಕಚೇರಿಯಲ್ಲಿ ಶೃಂಗೇರಿ ಕ್ಷೇತ್ರದ 12 ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರದಿಂದ ಬಡವರಿಗೆ, ಅರ್ಹರಿಗೆ ನೀಡುತ್ತಿರುವ ನೀರಾವರಿ ಯೋಜನೆಯಡಿ ಮೋಟಾರ್, ಪಂಪ್‌ಸೆಟ್ ಹಾಗೂ ಇತರೆ ಇನ್ನಿತರೆ ಸಲಕರಣೆಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಕರೆ ನೀಡಿದರು.
ಮಂಗಳವಾರ ಶಾಸಕರ ಕಚೇರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ನೀಡಿದ ಪಂಪ್‌ಸೆಟ್, ಮೋಟಾರ್, ಮೀಟರ್ ಬೋರ್ಡ್ ಸಲಕರಣೆ ವಿತರಿಸಿ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾಗ್ಯಗಳ ಮೂಲಕ ₹255 ಕೋಟಿ ಅನುದಾನವನ್ನು ಅರ್ಹ ಫಲಾನು ಭವಿಗಳಿಗೆ, ಬಡವರಿಗೆ ನೇರವಾಗಿ ಅವರವರ ಖಾತೆಗೆ ತಲುಪಿಸುತ್ತಿದೆ. ಅರ್ಹ ಫಲಾನುಭವಿಗಳು ನೆಮ್ಮದಿ ಬದುಕು ಕಟ್ಟಿಕೊಂಡಿದ್ದಾರೆ. ಭಾಗ್ಯಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳೂ ಕೂಡ ಆಗುತ್ತಿವೆ. ಸರ್ಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲಭಿವೃದ್ಧಿ ಇಲಾಖೆಯಿಂದ ಒಬ್ಬ ಫಲಾನುಭವಿಗೆ ತಲಾ ₹5 ಲಕ್ಷ ದಂತೆ ಕ್ಷೇತ್ರದ ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕಿನ 12 ಜನ ಫಲಾನುಭವಿಗಳಿಗೆ ಕೊಳವೆ ಬಾವಿ, ಪಂಪ್‌ಸೆಟ್, ಮೀಟರ್ ಬೋರ್ಡ್, ಮೋಟಾರ್ ಸಾಮಾಗ್ರಿಗೆ ₹60 ಲಕ್ಷ ಅನುದಾನ ನೀಡಿದೆ. ಸಂಬಂಧಪಟ್ಟ ಇಲಾಖೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ಮೋಟಾರ್ ಸಾಮಾಗ್ರಿಗಳನ್ನು ಸರಬರಾಜು ಮಾಡಿದ, ಟೆಂಡರ್ ಪಡೆದ ಗುತ್ತಿಗೆದಾರ ಗುಣಮಟ್ಟದ ಸಾಮಾಗ್ರಿಗಳನ್ನು ವಿತರಿಸಿದ್ದಾರೆಯೇ ಎಂಬುದನ್ನು ದೃಡೀಕರಿಸಬೇಕು. ಮೋಟಾರ್ ಅಳವಡಿಸಿ ನೀರೊದಗಿಸಿದ ನಂತರ ಧೃಢೀಕರಣ ಪತ್ರ ನೀಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಣಸ್ವಾಮಿ, ಕಾಂಗ್ರೆಸ್ ಮುಖಂಡರಾದ ಪಿ.ಆರ್.ಸದಾಶಿವ, ಎಸ್.ಡಿ.ರಾಜೇಂದ್ರ, ಚಿಕ್ಕೆರೆ ಸುಂದರೇಶ್, ಬಿಳಾಲು ಮನೆಉಪೇಂದ್ರ, ಸುನೀಲ್ ಕುಮಾರ್, ಪ್ರಶಾಂತಶೆಟ್ಟಿ, ಎಂ.ಆರ್.ರವಿಶಂಕರ್, ಎಚ್.ಎಂ.ಮನು, ಈ.ಸಿ.ಜೋಯಿ,ದೇವಂತ್‌ಗೌಡ,ಆನೆಗದ್ದೆ ವೆಂಕಟೇಶ್, ದ್ವಾರಮಕ್ಕಿ ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.