ಕನ್ನಡಪ್ರಭ ವಾರ್ತೆ ಕಲಬುರಗಿ
ಪೌರ ಸಂಸ್ಥೆಗಳಿಂದ ನಗರ-ಪಟ್ಟಣದ ನಿವಾಸಿಗಳ ಕಲ್ಯಾಣಕ್ಕೆ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಿಗೆ ಹಣಕಾಸು ಆಯೋಗದಿಂದ ನೀಡಲಾದ ಅನುದಾನದಡಿ ಇದೂವರೆಗಿನ ಖರ್ಚು-ವೆಚ್ಚ ಹಂಚಿಕೆ ಸೇರಿದಂತೆ ನಾಗರಿಕರಿಗೆ ನೀಡಲಾಗುತ್ತಿರುವ ಸವಲತ್ತುಗಳ ಬಗ್ಗೆ ವಿಸ್ತಾರವಾಗಿ ಆಯಾ ಜಿಲ್ಲೆಗಳ ಅಧಿಕಾರಿಗಳಿಂದ ಆಯೋಗವು ಸಮಗ್ರ ಮಾಹಿತಿ ಪಡೆಯಿತು.
ಸಭೆಯ ಚರ್ಚೆಯಲ್ಲಿ ಆಯೋಗದ ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ಪೌರ ಸಂಸ್ಥೆಗಳಿಂದ ಖಾತಾ, ಆಸ್ತಿ ವರ್ಗಾವಣೆದಂತಹ ಪ್ರಕರಣದಲ್ಲಿ ಸಾರ್ವಜನಿಕರಿಂದ ಅನಗತ್ಯ ದಾಖಲೆ ಕೇಳಿ ಅರ್ಜಿ ವಿಲೇವಾರಿಯಲ್ಲಿ ವಿಳಂಬ ಮಾಡದೆ ಕಾಲಮಿತಿಯಲ್ಲಿ ಸೇವೆ ನೀಡಬೇಕು. ಅರ್ಜಿ ವಿಲೇವಾರಿ ಮತ್ತಷ್ಟು ಜನಸ್ನೇಹಿಯಾಗಿ ಸರಳೀಕರಣಗೊಳಿಸಬೇಕು. ಹೀಗಾದಾಗ ಮಾತ್ರ ಪೌರ ಸಂಸ್ಥೆಗಳ ಮೇಲೆ ಸಾರ್ವಜನಿಕರ ಗೌರವ ಹೆಚ್ಚುವುದಲ್ಲದೆ ಅವರಿಂದ ಸರಿಯಾಗಿ ಕರ ಪಾವತಿ ನಿರೀಕ್ಷಿಸಬಹುದಾಗಿದೆ ಎಂದರು.ಬೀದರ ಜಿಲ್ಲೆ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಬೀದರ್ ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸುದ್ದಿನ್ ಮಾತನಾಡಿ, ಬೀದರ ನಗರದಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತುತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದಾಗ ಸದಸ್ಯ ಮೊಹಮ್ಮದ್ ಸನಾವುಲ್ಲಾ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಹೊಸ ಬಡಾವಣೆಗೆ ನೀಡಲಾಗುವ ಪರವಾನಿಗೆ ವ್ಯವಸ್ಥೆ ಸರಳೀಕರಣ, ಆನ್ ಲೈನ್ ವ್ಯವಸ್ಥೆ ಜಾರಿಗೆ ತಂದು ತ್ವರಿತಗತಿಯಲ್ಲಿ ಜನರಿಗೆ ಸೇವೆ ನೀಡಿದಲ್ಲಿ ಇದನ್ನು ನಿಯಂತ್ರಿಸಬಹುದು. ಆ ನಿಟ್ಟಿನಲ್ಲಿ ಪೌರ ಸಂಸ್ಥೆ ಚುನಾಯಿತ ಪ್ರತಿನಿಧಿಗಳು-ಅಧಿಕಾರಿಗಳು ಯೋಚಿಸಬೇಕು ಎಂದು ಸಲಹೆ ನೀಡಿದರು.
ನಗರ-ಪಟ್ಟಣಗಳ ಅಭಿವೃದ್ಧಿ ಸ್ಥಳೀಯ ಸಂಪನ್ಮೂಲ ಕ್ರೋಢಿಕರಣದ ಮೇಲೆ ನಿರ್ಧರಿತವಾಗಿರುತ್ತದೆ. ಹೀಗಾಗಿ ಪೌರ ಸಂಸ್ಥೆಗಳು ಕರ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಭಿನ್ನ ಪ್ರಯೋಗ ಮಾಡಿ ಕರ ವಸೂಲಿ ಮಾಡಬೇಕು. ಆನ್ ಲೈನ್, ಮೊಬೈಲ್ ಮೂಲಕ ಕರ ಪಾವತಿಗೆ ಅವಕಾಶ ಕಲ್ಪಿಸಬೇಕು. ವಿಶೇಷವಾಗಿ ಕರ ಪಾವತಿಯಿಂದ ನಗರದಲ್ಲಾಗುವ ಅಭಿವೃದ್ಧಿ ಕಾರ್ಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರನ್ನು ಪ್ರೇರೇಪಿಸಬೇಕಿದೆ. ವಾಸ್ತವವಾಗಿ ನೀವು ಜನರ ಬಳಿಗೆ ಹೋಗಲ್ಲ, ಅವ್ರು ಕರ ಕಟ್ಟಲ್ಲ. ಈ ಪರಿಸ್ಥಿತಿ ಬದಲಾಯಿಸಬೇಕಿದೆ. ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ವಯತೆಯಿಂದ ಈ ಕಾರ್ಯ ಮಾಡಬೇಕಿದೆ ಎಂದು ಒತ್ತಿ ಹೇಳಿದರು.
ಕೊಪ್ಪಳ ಡಿ.ಯು.ಡಿ.ಸಿ ಯೋಜನಾ ನಿರ್ದೇಶಕಿ ಕಾವ್ಯರಾಣಿ ಮಾತನಾಡಿ, ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಠಗಿ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಣಕಾಸು ಅಯೋಗದಿಂದ 2016-17 ರಿಂದ 2022-23ರ ವರೆಗೆ ಎಸ್.ಎಫ್.ಸಿ. ಯೋಜನೆಯಡಿ 9,164.56 ಲಕ್ಷ ರು. ಬಿಡುಗಡೆಯಾಗಿದ್ದು, ಇದರಲ್ಲಿ 8,825.38 ಲಕ್ಷ ರು. ಖರ್ಚು ಮಾಡಲಾಗಿದೆ. ಅದೇ ರೀತಿ ಮುಕ್ತ ನಿಧಿ ಯೋಜನೆಯಡಿ 4,185.13 ಲಕ್ಷ ರು. ಹಂಚಿಕೆಯಾಗಿ 3,540.22 ಲಕ್ಷ ರು. ಬಿಡುಗಡೆಯಾಗಿದೆ. ಇದರಲ್ಲಿ 3,542.18 ಲಕ್ಷ ರು. ಖರ್ಚು ಮಾಡಿ ಶೇ.100ಕ್ಕಿಂತ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸಿದೆ. ಪ್ರಸಕ್ತ 2023-24ನೇ ಸಾಲಿನಲ್ಲಿ ಕೊಪ್ಪಳ ನಗರಸಭೆಯು ಅಕ್ಟೋಬರ್-2023ರ ಅಂತ್ಯಕ್ಕೆ ಕರ ವಸೂಲಿ ನಿಗದಿತ ಗುರಿ 55 ಕೋಟಿ ರು. ಗಳಿಗೆ ಎದುರಾಗಿ 47 ಕೋಟಿ ರು. ವಸೂಲು ಮಾಡಿದೆ. ಕರ ವಸೂಲಾತಿಯಲ್ಲಿ ರಾಜ್ಯದ ಸರಾಸರಿ ಶೇ.66 ಇದ್ದರೆ ಕೊಪ್ಪಳ ನಗರಸಭೆದು ಶೇ.90 ಇದೆ ಎಂದು ಆಯೋಗದ ಮುಂದೆ ಜಿಲ್ಲೆಯ ಪೌರ ಸಂಸ್ಥೆಗಳ ಪ್ರಗತಿ ಚಿತ್ರ ಮುಂದಿಟ್ಟರು.
ಬೀದರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ ಅವರು ಮಾತನಾಡಿ, ಜಿಲ್ಲೆಯಲ್ಲಿ 7 ಸ್ಥಳೀಯ ಸಂಸ್ಥೆಗಳಿದ್ದು, ಕರ ವಸೂಲಾತಿಯೆ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ವಾಣಿಜ್ಯ ಅಂಗಡಿ-ಮುಂಗಟ್ಟು, ಮಾಲ್ ಗಳಿಂದ ಕರ ವಸೂಲಾತಿಯಾಗುತ್ತಿದೆ. ಆದರೆ ಸರ್ಕಾರಿ ಸಂಸ್ಥೆ, ವಸತಿ ಗೃಹಗಳಿಂದ ಕರ ಬಾಕಿ ಇದೆ. ಬ್ರಿಮ್ಸ್ ಸಂಸ್ಥೆಯಿಂದಲೆ 8 ಕೋಟಿ ರು. ಕರ ಬಾಕಿ ಇದೆ ಎಂದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ನಗರಸಭೆ ಸದಸ್ಯ ಮೊಹಮ್ಮದ ಖದೀರ, ಬೀದರ್ ನಗರದಲ್ಲಿ ನಳ ಸಂಪರ್ಕದ ಜೋಡಣೆ ಸರಿಯಾಗಿರದ ಕಾರಣ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕರ ವಸೂಲಿ ಬಾಕಿ ಇದ್ದು, ಇದನ್ನು ಒನ್ ಟೈಮ್ ಸೆಟ್ಲಮೆಂಟ್ ಆಧಾರದ ಮೇಲೆ ಪಾವತಿಸಲು ಅವಕಾಶ ನೀಡಿದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಸೇರಿದಂತೆ ಏಳು ಜಿಲ್ಲೆಗಳಿಂದ ಬಂದ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಭಾಗಿಯಾಗಿದ್ದರು.