ಕಡೂರು: ಅನಾದಿ ಕಾಲದಿಂದಲೂ ಗುರುಶಿಷ್ಯರ ಸಂಬಂಧಕ್ಕೆ ಒಂದು ಬೆಲೆ ಇದ್ದು ಅದು ಇಂದಿಗೂ ಪ್ರಸ್ತುತವಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಚಿಕ್ಕಲಿಂಗೇಗೌಡ ಹೇಳಿದರು.
ತಾಲೂಕಿನ ಸಖರಾಯಪಟ್ಟಣದಲ್ಲಿ ಸರಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ಆವರಣದಲ್ಲಿ 2003-2006ರ ವರೆಗಿನ ಹಿರಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂದು ಕಲಿಸಿದ ವಿದ್ಯೆ ಇಂದು ಅವರ ಬದುಕಿಗೆ ದಾರಿ ದೀಪವಾಗಿದೆ. ಅದಕ್ಕೆ ಗುರುದಕ್ಷಿಣೆಯಾಗಿ ಇಂದು ವಿದ್ಯಾರ್ಥಿಗಳೆಲ್ಲ ಸೇರಿ ನಮ್ಮೆಲ್ಲರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸ ತಂದಿದೆ. ಇದೇ ರೀತಿ ಮನೆಯಲ್ಲಿರುವ ತಂದೆ ತಾಯಿಗಳು ಸೇರಿದಂತೆ ಹಿರಿಯರನ್ನು ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಓದಿದ ಶಾಲೆ ಮತ್ತು ಶಿಕ್ಷಕರನ್ನು ಮರೆಯದೆ ಸಂಸ್ಕೃತಿಯನ್ನು ಮೆರೆದಿದ್ದಾರೆ. ಮುಂಬರುವ ವಿದ್ಯಾರ್ಥಿಗಳು ಇದನ್ನು ರೂಢಿಸಿಕೊಳ್ಳಬೇಕು. ಓದುವಾಗ ಸರಿಯಾಗಿ ಮನಸ್ಸಿಟ್ಟು ಓದಿದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಇದಕ್ಕೆ ಉದಾಹರಣೆ ಈ ಹಿರಿಯ ವಿದ್ಯಾರ್ಥಿಗಳು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಖರಾಯಪಟ್ಟಣ ಠಾಣಾಧಿಕಾರಿ ಪವನ್, ಗುರುವೇ ಮಹಾ ಎನ್ನುವ ಕಾಲದಲ್ಲಿ ಇಂತಹ ವಿದ್ಯಾರ್ಥಿಗಳು ಅಪರೂಪ. ತಾವು ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ತಾವು ಓದಿದ ಶಾಲೆಗೆ ಯಾವ ರೂಪದಲ್ಲಾದರೂ ಸಹಾಯ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕೆ.ಎಲ್.ಕೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ ಸಿ.ಬಸವರಾಜು ಮಾತನಾಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಮಹಾದೇವಪ್ಪ, ಪುಟ್ಟಣ್ಣ, ಚಿಕ್ಕಲಿಂಗೇಗೌಡ, ಮೋಹನ್, ದಾಸಪ್ಪ, ಮಂಜುಳ, ಗೀತಾ, ಪುಟ್ಟಮ್ಮ ಶೇಖರಪ್ಪ, ಜ್ಯೋತಿ, ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾರವಿಕುಮಾರ್, ಹಿರಿಯ ವಿದ್ಯಾರ್ಥಿಗಳಾದ ರವಿಕುಮಾರ್, ನಳಿನ, ಗಿರಿ, ಸ್ವಾಮಿ ಹಾಗೂ ನೂರಾರು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಿರಿಯ ವಿದ್ಯಾರ್ಥಿನಿ ಚೈತ್ರಾ ಪ್ರಾಸ್ತಾವಿಕವಾಗಿ ಮಾತನಾಡಿದರು.